ADVERTISEMENT

ಗ್ರೀಸ್‌ ಭವಿಷ್ಯಕ್ಕಾಗಿ ಮತ ಚಲಾವಣೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2015, 19:30 IST
Last Updated 5 ಜುಲೈ 2015, 19:30 IST

ಅಥೆನ್ಸ್‌ (ಎಎಫ್‌ಪಿ): ಐರೋಪ್ಯ ಒಕ್ಕೂಟದಲ್ಲಿ ಗ್ರೀಸ್‌ನ ಭವಿಷ್ಯ ನಿರ್ಧರಿಸುವ ಮಹತ್ವದ ಜನಮತ ಸಂಗ್ರಹ ಭಾನುವಾರ ನಡೆಯಿತು.
ಬೆಳಿಗ್ಗೆ 7ರಿಂದ ಸಂಜೆ 7 (ಭಾರತೀಯ ಕಾಲಮಾನ ಬೆಳಿಗ್ಗೆ 9.30ರಿಂದ ರಾತ್ರಿ 9.30) ಗಂಟೆಯವರೆಗೆ ಮತದಾನ ನಡೆದಿದೆ. ಮಧ್ಯರಾತ್ರಿಯ ವೇಳೆ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ.

ಸಾಲ ಹಾಗೂ ಆರ್ಥಿಕ ಬಿಕ್ಕಟ್ಟಿನಿಂದ ಬಹುತೇಕ ದಿವಾಳಿಯಾಗಿರುವ ಗ್ರೀಸ್‌ಗೆ ಮತ್ತಷ್ಟು ಸಾಲದ ಕೊಡುಗೆ ನೀಡಲು ಯುರೋಪ್‌ ಸೆಂಟ್ರಲ್‌ ಬ್ಯಾಂಕ್‌ ಸೇರಿದಂತೆ ಇತರ ಸಾಲಗಾರರು ಕಠಿಣ ಮಿತವ್ಯಯದ ಷರತ್ತುಗಳನ್ನು ಒಡ್ಡಿದ್ದಾರೆ. ಅಂತರರಾಷ್ಟ್ರೀಯ ಹಣಕಾಸು ನಿಧಿಗೆ ಗ್ರೀಸ್‌ ದೇಶ 160 ಕೋಟಿ ಯುರೊ (ಅಂದಾಜು ₨ 11,277 ಕೋಟಿ) ಮರುಪಾವತಿಸಬೇಕಿದೆ.

ಆಡಳಿತ ಪಕ್ಷದ ವಿರೋಧ: ಆದರೆ, ಈ ಮಿತವ್ಯಯದ ಷರತ್ತುಗಳನ್ನು  ಎಡಪಂಥೀಯ ಆಡಳಿತ ಪಕ್ಷ ಸಿರಿಜಾ ಹಾಗೂ ಪ್ರಧಾನಿ ಅಲೆಕ್ಸಿಸ್‌ ಸಿಪ್ರಾಸ್‌ ವಿರೋಧಿಸಿದ್ದಾರೆ. ಮಿತವ್ಯಯದ ಷರತ್ತು ಬೇಕೋ, ಬೇಡವೋ ಎಂಬುದನ್ನು ಗ್ರೀಸ್‌ ಜನರೇ ನಿರ್ಧರಿಸಲಿದ್ದಾರೆ ಎಂದಿದ್ದ ಪ್ರಧಾನಿ ಸಿಪ್ರಾಸ್‌, ಕಳೆದ ಭಾನುವಾರ ಜನಮತ ಸಂಗ್ರಹದ ಘೋಷಣೆ ಮಾಡಿದ್ದರು.  ಒಂದು ವಾರ ಕಾಲ ಬ್ಯಾಂಕ್‌ಗಳಿಗೆ ರಜೆ ಘೋಷಿಸಿದ್ದರು.

ಮಿತವ್ಯಯದ ವಿರುದ್ಧ ಮತ ಚಲಾಯಿಸುವಂತೆ ಜನರಿಗೆ ಕರೆ ನೀಡಿದ್ದರು. ಈ ಷರತ್ತುಗಳನ್ನು ಜನ ವಿರೋಧಿಸಿದಲ್ಲಿ ಯುರೊ ವಲಯದ ಜತೆ ಚೌಕಾಸಿಗೆ ಇಳಿಯಬಹುದು ಎಂಬ ನಿರೀಕ್ಷೆಯನ್ನು ಸಿಪ್ರಾಸ್‌ ಹೊಂದಿದ್ದಾರೆ. ಗ್ರೀಸ್‌ ಜನ ಮಿತವ್ಯಯವನ್ನು ವಿರೋಧಿಸಿದಲ್ಲಿ ಆ ದೇಶ ಯುರೊ ವಲಯದಿಂದ ಹೊರಹೋಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಜರ್ಮನಿ ಚಾನ್ಸಲರ್‌ ಏಂಜಲಾ ಮರ್ಕೆಲ್‌ ಸೇರಿದಂತೆ ಐರೋಪ್ಯ ಒಕ್ಕೂಟದ ಇತರ ನಾಯಕರು ಗ್ರೀಸ್‌ ಮಿತವ್ಯಯದ ಪರ ಮತ ಚಲಾಯಿಸಲಿ ಎಂಬ ಇಚ್ಛೆ ಹೊಂದಿದ್ದಾರೆ. ‘ಮಿತವ್ಯಯ’ ಬೇಕು, ಬೇಡ ಎಂಬುದರ ನಡುವೆ ಗ್ರೀಸ್‌ ದೇಶ ಇಬ್ಭಾಗವಾದಂತೆ ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.