ADVERTISEMENT

ಚೀನಾದಲ್ಲಿ ಭೂಕುಸಿತ:6 ಸಾವು

​ಪ್ರಜಾವಾಣಿ ವಾರ್ತೆ
Published 24 ಜೂನ್ 2017, 19:30 IST
Last Updated 24 ಜೂನ್ 2017, 19:30 IST
ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿರುವ ಸಿಬ್ಬಂದಿ  –ರಾಯಿಟರ್ಸ್ ಚಿತ್ರ
ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿರುವ ಸಿಬ್ಬಂದಿ –ರಾಯಿಟರ್ಸ್ ಚಿತ್ರ   

ಬೀಜಿಂಗ್‌ : ನೈರುತ್ಯ ಚೀನಾದ ಸಿಚೌನ್‌ ಪ್ರಾಂತ್ಯದಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ ಭಾರಿ ಭೂಕುಸಿತದಲ್ಲಿ 6 ಮಂದಿ ಸಾವಿಗೀಡಾಗಿದ್ದು, 112ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.

ಕ್ಸಿನ್ ಮೋ ಗ್ರಾಮದ ಗುಡ್ಡ ಕುಸಿದ ಪರಿಣಾಮ ಅಲ್ಲಿದ್ದ ಸುಮಾರು 62ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ.  ಸುಮಾರು 2 ಕಿ.ಮೀ ವರೆಗೂ  ಅವಶೇಷಗಳು ಬಿದ್ದಿವೆ. ಅವಶೇಷಗಳಡಿಯಲ್ಲಿ 100ಕ್ಕೂ ಹೆಚ್ಚು ಮಂದಿ ಸಿಲುಕಿರುವ ಸಾಧ್ಯತೆ ಎಂದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಕಳೆದೊಂದು ವಾರದಿಂದ ಕ್ಸಿನ್ ಮೋ ಗ್ರಾಮದ ಸುತ್ತಮುತ್ತ ಭಾರಿ ಪ್ರಮಾಣದಲ್ಲಿ ಮಳೆ ಬೀಳುತ್ತಿದ್ದು, ಇದರಿಂದ ಇಲ್ಲಿನ ಭೂಮಿ ಸಡಿಲವಾಗಿತ್ತು. ಇದೇ ಕಾರಣಕ್ಕೆ ಭೂ ಕುಸಿದಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ADVERTISEMENT

ಮನೆಗಳ ಅವಶೇಷಗಳನ್ನು ಹೊರ ತೆಗೆಯುವ ಕಾರ್ಯಾಚರಣೆಯಲ್ಲಿ ರಕ್ಷಣಾ ತಂಡಗಳು ತೊಡಗಿದೆ. ಕಾರ್ಯಾಚರಣೆ ಸಂದರ್ಭದಲ್ಲಿ ಒಂದೇ ಕುಟುಂಬದ ಮೂವರನ್ನು ಜೀವಂತವಾಗಿ ರಕ್ಷಿಸಿ,  ಚಿಕಿತ್ಸೆಗೆ ದಾಖಲಿಸಲಾಗಿದೆ.

ಭೂಕುಸಿತದಲ್ಲಿ ಸಿಲುಕಿದವರನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಚೀನಾ ಪ್ರಧಾನಿ ಕ್ಸಿ ಜಿನ್‌ ಪಿಂಗ್‌ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನರು ತೊಡಗಿದ್ದಾರೆ ಎಂದು ಸಿಚೌನ್‌ ಸರ್ಕಾರದ ವಕ್ತಾರ ತಾಂಗ್‌ ಲಿಮಿನ್‌ ತಿಳಿಸಿದ್ದಾರೆ.
‘ಕ್ಸಿನ್ ಮೋ ಗ್ರಾಮದಲ್ಲಿ ಕೇವಲ ಒಂದು ಮನೆ ಮಾತ್ರ ಉಳಿದಿದೆ. ಅದು ಸಹ ಹಾನಿಗೊಂಡಿದೆ. ಉಳಿದ ಮನೆಗಳು ಸಂಪೂರ್ಣವಾಗಿ ನೆಲಸಮಗೊಂಡಿವೆ’ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿಚೌನ್‌ ಪ್ರಾಂತ್ಯದ ವೆನ್‌ಚೌನ್‌ನಲ್ಲಿ 2008ರಲ್ಲಿ ಸಂಭವಿಸಿದ ಭೂಕಂಪದಲ್ಲಿ 87 ಸಾವಿರ ಜನರು ಮೃತಪಟ್ಟಿದ್ದರು. ಮಾವೊಕ್ಸಿಯಾನ್‌ನಲ್ಲಿ ಭೂಕಂಪದಿಂದ ಉಂಟಾದ ಭೂಕುಸಿತದಲ್ಲಿ 37 ಪ್ರವಾಸಿಗರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.