ADVERTISEMENT

ಚೀನಾ ವಿರೋಧದ ನಡುವೆ ದಲೈ ಲಾಮಾ ಭೇಟಿಗೆ ಅನುಮತಿ

ಏಜೆನ್ಸೀಸ್
Published 3 ಮಾರ್ಚ್ 2017, 19:30 IST
Last Updated 3 ಮಾರ್ಚ್ 2017, 19:30 IST
ಚೀನಾ ವಿರೋಧದ ನಡುವೆ  ದಲೈ ಲಾಮಾ ಭೇಟಿಗೆ ಅನುಮತಿ
ಚೀನಾ ವಿರೋಧದ ನಡುವೆ ದಲೈ ಲಾಮಾ ಭೇಟಿಗೆ ಅನುಮತಿ   

ನವದೆಹಲಿ: ಟಿಬೆಟ್‌ ಧರ್ಮಗುರು ದಲೈ ಲಾಮಾ ಅವರು ಮುಂದಿನ ತಿಂಗಳು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಅವರನ್ನು ಭಾರತ ಸರ್ಕಾರದ ಪ್ರತಿನಿಧಿಗಳು ಭೇಟಿಯಾಗಲಿದ್ದಾರೆ. 

ಭಾರತದ ಈ ನಿರ್ಧಾರಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ. ಅರುಣಾಚಲ ಪ್ರದೇಶಕ್ಕೆ ಈ ಹಿಂದೆ ವಿದೇಶಿ ಮತ್ತು ಭಾರತದ ನಾಯಕರು ಭೇಟಿ ನೀಡಿದ್ದಾಗಲೂ ಚೀನಾ ಆಕ್ಷೇಪ ವ್ಯಕ್ತಪಡಿಸಿತ್ತು.

‘ಭಾರತ ಒಂದು ಪ್ರಜಾಪ್ರಭುತ್ವವಾದಿ ರಾಷ್ಟ್ರ, ದಲೈ ಲಾಮಾ ಅವರು ದೇಶದ ಯಾವುದೇ ಪ್ರದೇಶಕ್ಕೆ ಭೇಟಿ ನೀಡಿದರೂ ತಡೆಯುವುದಿಲ್ಲ. ಧಾರ್ಮಿಕ ನಾಯಕರಾಗಿ  ಅವರು ಸ್ಥಳಕ್ಕೆ ಭೇಟಿ ಮಾಡಬೇಕೆಂದು ಅವರ ಭಕ್ತರು ಒತ್ತಾಯ ಮಾಡುತ್ತಿದ್ದಾರೆ. ಆದ್ದರಿಂದ ಅವರ ಭೇಟಿ ತಡೆಹಿಡಿಯಲು ಕಾರಣವಿಲ್ಲ’ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ.

ADVERTISEMENT

ಭೇಟಿ ಸಂದರ್ಭದಲ್ಲಿ ಚೀನಾ ವಿರೋಧಿ ಚಟುವಟಿಕೆ ನಡೆಸಲು ಭಾರತ ವೇದಿಕೆ ಕಲ್ಪಿಸಬಾರದು ಎಂದು ಚೀನಾ ವಿದೇಶಾಂಗ ಸಚಿವಾಲಯ ಹೇಳಿದೆ.

ಭಾರತಕ್ಕೆ ಎಚ್ಚರಿಕೆ ನೀಡಿದ ಚೀನಾ
(ಬೀಜಿಂಗ್‌ ವರದಿ): ಲಾಮಾ ಭೇಟಿಗೆ ಒಪ್ಪಿಗೆ ಸೂಚಿಸಿರುವ ಭಾರತದ ನಿರ್ಧಾರ ದಿಂದ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಹದಗೆಡಲಿದ್ದು, ವಿವಾದಿತ ಗಡಿ ಪ್ರದೇಶದಲ್ಲಿನ ಶಾಂತಿಗೆ ಭಂಗ ಉಂಟಾಗಲಿದೆ ಎಂದು ಚೀನಾ ಭಾರತಕ್ಕೆ ಎಚ್ಚರಿಕೆ ನೀಡಿದೆ, ‘ಧರ್ಮಗುರುವಿಗೆ ಅನುಮತಿ ನೀಡಿರುವ ಭಾರತದ ಕ್ರಮವನ್ನು ಚೀನಾ ಗಂಭೀರವಾಗಿ ತೆಗೆದುಕೊಂಡಿದೆ’ ಎಂದು ಚೀನಾ ವಿದೇಶಾಂಗ ಸಚಿವಾಲ ಯದ ವಕ್ತಾರ ಜೆಂಗ್‌ ಶುಆಂಗ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

‘ದಲೈ ಲಾಮಾ ಮತ್ತವರ ಸಂಗಡಿಗರು  ದೀರ್ಘ ಕಾಲದಿಂದ ಚೀನಾ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಆದ್ದರಿಂದ ವಿವಾದಿತ ಪ್ರದೇಶಕ್ಕೆ ಅವರು ಭೇಟಿ ನೀಡುವುದನ್ನು ಚೀನಾ ಉಗ್ರವಾಗಿ ಖಂಡಿಸುತ್ತದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.