ADVERTISEMENT

ಚೀನಾ ಶಸ್ತ್ರ ಪ್ರದರ್ಶನ

ಎರಡನೇ ಜಾಗತಿಕ ಮಹಾಯುದ್ಧದ 70ನೇ ವಿಜಯೋತ್ಸವ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 19:32 IST
Last Updated 3 ಸೆಪ್ಟೆಂಬರ್ 2015, 19:32 IST

ಬೀಜಿಂಗ್ (ಪಿಟಿಐ): ಬೀಜಿಂಗ್‌ನ ಟಿಯಾನಾನ್‌ಮೆನ್‌ ಸ್ಕ್ವೇರ್‌ ಗುರುವಾರ ಚೀನಾದ ಯುದ್ಧ ಸಾಮರ್ಥ್ಯಕ್ಕೆ ಸಾಕ್ಷಿಯಾಯಿತು. ಟ್ಯಾಂಕುಗಳು, ಕ್ಷಿಪಣಿಗಳು ಮತ್ತು ವಿವಿಧ ಯುದ್ಧೋಪಕರಣಗಳು ಇದೇ ಮೊದಲ ಬಾರಿಗೆ ಚೀನಾದ ಜನರ ಮುಂದೆ ಬಹಿರಂಗವಾಗಿ ಕಾಣಿಸಿಕೊಂಡವು.

ಎರಡನೇ ಜಾಗತಿಕ ಮಹಾ ಯುದ್ಧದಲ್ಲಿ ಜಪಾನ್‌ ವಿರುದ್ಧದ ಗೆಲುವಿನ 70ನೇ ವರ್ಷಾಚರಣೆ ಸಂಭ್ರಮದಲ್ಲಿರುವ ಚೀನಾ, ಸೇನೆಯ ಬೃಹತ್ ಪಥಸಂಚಲನದಲ್ಲಿ ತನ್ನ ಅಗಾಧ ಯುದ್ಧ ಸಲಕರಣೆಗಳನ್ನು ಪ್ರದರ್ಶಿಸಿತು.

‘ಏರ್‌ಕ್ರಾಫ್ಟ್‌ ಕ್ಯಾರಿಯರ್ ಕಿಲ್ಲರ್ಸ್’ ಎಂದೇ ಕರೆಯಲಾಗುತ್ತಿರುವ ಡಾಂಗ್‌ಫೆಂಗ್ 21ಡಿ ಕ್ಷಿಪಣಿಗಳನ್ನು ಚೀನಾ ಮೊದಲ ಬಾರಿಗೆ ಜಗತ್ತಿಗೆ ಪ್ರದರ್ಶಿಸಿದೆ. 1700 ಕಿ.ಮೀ ದೂರದಲ್ಲಿರುವ ನೌಕೆಗಳನ್ನು ನಿಖರವಾಗಿ ಉಡಾಯಿಸುವ ಸಾಮರ್ಥ್ಯ ಈ ಕ್ಷಿಪಣಿಗಿದೆ. ಈ ಕ್ಷಿಪಣಿ ಅಮೆರಿಕದ ಕಳವಳಕ್ಕೂ ಕಾರಣವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ವಿಮಾನವಾಹಕ ನೌಕೆಗೆಂದೇ ಅಭಿವೃದ್ಧಿಪಡಿಸಿರುವ ಜೆ–15 ಯುದ್ಧ ವಿಮಾನವನ್ನೂ ಚೀನಾ ಪ್ರದರ್ಶಿಸಿದೆ. ಸೇನಾ ಪಥಸಂಚಲನದಲ್ಲಿ ಪಾಲ್ಗೊಂಡಿದ್ದ ಖಂಡಾಂತರ ಕ್ಷಿಪಣಿಗಳು, ಟ್ಯಾಂಕ್‌ಗಳು, ಹೋವರ್‌ ಕ್ರಾಫ್ಟ್‌ಗಳು (ನೀರು ಮತ್ತು ನೆಲದ ಮೇಲೆ ಸಂಚರಿಸುವ ವಾಹನ), ಡ್ರೋನ್‌ಗಳು ಮತ್ತು ಇತರ ಸೇನಾ ಸಲಕರಣೆಗಳು ಇಲ್ಲಿನ ‘ಟಿಯಾನಾನ್‌ಮೆನ್‌ ಸ್ಕ್ವೇರ್‌’ ಹಾದುಹೋದವು.

ಮೊದಲ ಬಾರಿ ಸಾರ್ವಜನಿಕ ಪ್ರದರ್ಶನ: ಪಥಸಂಚಲನದಲ್ಲಿ ಪ್ರದರ್ಶಿಸಿದ್ದ ಸೇನಾ ಸಲಕರಣೆಗಳಲ್ಲಿ ಶೇ 80ಕ್ಕೂ ಹೆಚ್ಚು ಯುದ್ಧೋಪಕರಣಗಳನ್ನು ಸಾರ್ವಜನಿಕವಾಗಿ ಇದೇ ಮೊದಲ ಬಾರಿಗೆ ಪ್ರದರ್ಶಿಸಲಾಗಿದೆ. ದಕ್ಷಿಣ ಚೀನಾ ಸಮುದ್ರ ಮತ್ತು ಪೂರ್ವ ಚೀನಾ ಸಮುದ್ರದ ಮೇಲಿನ ಸಾರ್ವಭೌಮತೆಗೆ ಸಂಬಂಧಿಸಿದಂತೆ ನೆರೆಯ ರಾಷ್ಟ್ರಗಳೊಂದಿಗೆ ಪೈಪೋಟಿ ನಡೆಯುತ್ತಿದೆ. ಇದೇ ಸಂದರ್ಭದಲ್ಲೇ, ಚೀನಾ ತನ್ನ ಅಗಾಧ ಸೇನಾ ಸಾಮರ್ಥ್ಯ ಮತ್ತು ಭಾರಿ ಯುದ್ದೋಪಕರಣಗಳನ್ನು ಪ್ರದರ್ಶಿಸಿರುವುದು ನೆರೆಯ ದೇಶಗಳ ಆತಂಕಕ್ಕೂ ಕಾರಣವಾಗಿದೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್, ದಕ್ಷಿಣ ಕೊರಿಯಾದ ಅಧ್ಯಕ್ಷ ಪಾರ್ಕ್ ಗಿಯೆನ್ ಹೆ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್‌ ಕಿ ಮೂನ್, ಭಾರತದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ.ಸಿಂಗ್ ಸೇರಿದಂತೆ 30 ವಿಶ್ವ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಜಯೋತ್ಸವದ 70ನೇ ವರ್ಷಾಚರಣೆ ಕುರಿತು ಮಾತನಾಡಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಎರಡನೇ ವಿಶ್ವಯುದ್ಧದಲ್ಲಿ ಜಪಾನ್ ದಾಳಿಯಿಂದ ಚೀನಾದ 3.5 ಕೋಟಿಗೂ ಹೆಚ್ಚು ಜನರು ಗಾಯಗೊಂಡರು. ಜಪಾನಿನ ಅಕ್ರಮಣದ ವಿರುದ್ಧದ ನಮ್ಮ ಹೋರಾಟ ಬೇಗನೆ ಆರಂಭವಾದರೂ ತೀರಾ ತಡವಾಗಿ ಮುಗಿಯಿತು ಎಂದು  ಹೇಳಿದರು.

ಜಪಾನ್‌ ವಿರುದ್ಧದ ಚೀನಾದ ಮೇಲುಗೈಯನ್ನು ಅವರು,  ‘ಅಭೂತಪೂರ್ವ ಗೆಲುವು’ ಎಂದರು.  ‘ಜಪಾನ್ ಸೇನೆಯನ್ನು ಯುದ್ಧದಲ್ಲಿ  ಹೊಸಕಿ ಹಾಕಿದೆವು’ ಎಂದೂ ಬಣ್ಣಿಸಿದರು. ‘ಶಾಂತಿಯುತ ಅಭಿವೃದ್ಧಿಯ ಹಾದಿ’ಯಲ್ಲಿ ಚೀನಾ ನಡೆಯುತ್ತದೆ ಎಂದೂ ಅವರು ಹೇಳಿದ್ದಾರೆ. 
*
ಜಪಾನ್ ಅಸಮಾಧಾನ
ಟೋಕಿಯೊ (ಎಎಫ್‌ಪಿ):
ಎರಡನೇ ಜಾಗತಿಕ ಮಹಾಯುದ್ಧದ ಗೆಲುವಿನ 70ನೇ ವರ್ಷಾಚರಣೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹೇಳಿದ ಮಾತುಗಳಲ್ಲಿ ಜಪಾನ್‌ ಜತೆಗಿನ ಸಂಬಂಧ ವೃದ್ಧಿಗೆ ಸಂಬಂಧಿಸಿದ ಅಂಶಗಳಿರಲಿಲ್ಲ ಎಂದು ಜಪಾನ್ ಅಸಮಾಧಾನ ವ್ಯಕ್ತಪಡಿಸಿದೆ. ‘ಸಂಭ್ರಮಾಚರಣೆಯಲ್ಲಿ ಜಪಾನ್ ವಿರೋಧಿ ಅಂಶಗಳ ಬದಲಿಗೆ, ಎರಡೂ ರಾಷ್ಟ್ರಗಳ ಸಂಬಂಧವೃದ್ಧಿಗೆ ಒತ್ತು ನೀಡುವಂತಹ ಕಾರ್ಯಕ್ರಮಗಳಿರಬೇಕು ಎಂದು ಚೀನಾಗೆ ಮನವಿ ಮಾಡಲಾಗಿತ್ತು.  ಆದರೆ ಕ್ಸಿ ಜಿನ್‌ಪಿಂಗ್ ಅವರ ಭಾಷಣದಲ್ಲಿ  ಅಂತಹ ಯಾವುದೇ ಅಂಶವಿಲ್ಲದಿರುವುದು ನಿರಾಸೆ ಉಂಟುಮಾಡಿದೆ’ ಎಂದು ಜಪಾನ್ ಸರ್ಕಾರದ ವಕ್ತಾರ ಯೋಷಿಹೈಡ್ ಸೂಗಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT