ADVERTISEMENT

ಜಪಾನ್‌ನಲ್ಲಿ ಪ್ರಬಲ, ನವದೆಹಲಿಯಲ್ಲಿ ಲಘು ಭೂಕಂಪ

​ಪ್ರಜಾವಾಣಿ ವಾರ್ತೆ
Published 30 ಮೇ 2015, 13:13 IST
Last Updated 30 ಮೇ 2015, 13:13 IST

ಟೋಕಿಯೊ(ಪಿಟಿಐ): ನೇಪಾಳದ ಪ್ರಕೃತಿ ವಿಕೋಪ ಮರೆಮಾಸುವ ಮುನ್ನವೇ, ಜಪಾನಿನಲ್ಲಿ ಶನಿವಾರ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್‌ ಮಾಪಕದಲ್ಲಿ ಕಂಪನದ ತೀವ್ರತೆ 7.8ರಷ್ಟು ದಾಖಲಾಗಿದೆ.ಇತ್ತ, ನವದೆಹಲಿಯಲ್ಲೂ ಲಘು ಕಂಪನದ ಅನುಭವವಾಗಿದೆ.

ವಸತಿ ಪ್ರದೇಶಗಳಲ್ಲಿನ ಕಟ್ಟಡಗಳು ಸುಮಾರು ಒಂದು ನಿಮಿಷಗಳ ಕಾಲ ಅಲುಗಾಡಿದ ಅನುಭವವಾಗಿದೆ ಎಂದು ಎಎಫ್‌ಪಿ ಸುದ್ದಿಸಂಸ್ಥೆಯ ವರದಿಗಾರ ತಿಳಿಸಿದ್ದಾರೆ.

ಕಂಪನ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.8ರಷ್ಟು ದಾಖಲಾಗಿದೆ. ಕಂಪನದ ಕೇಂದ್ರವು ಟೋಕಿಯೊದಿಂದ 874 ಕಿಲೋ ಮೀಟರ್‌ ದೂರದಲ್ಲಿ ಪೆಸಿಫಿಕ್‌ ಸಾಗರದಲ್ಲಿತ್ತು ಎಂದು ಅಮೆರಿಕದ ಭೂಗರ್ಭ ಸರ್ವೇಕ್ಷಣಾ ಕೇಂದ್ರ ತಿಳಿಸಿದೆ.

ದೆಹಲಿಯಲ್ಲೂ ಕಂಪಿಸಿದ ಭೂಮಿ..(ನವದೆಹಲಿ/ಪಿಟಿಐ ವರದಿ): ರಾಷ್ಟ್ರೀಯ ರಾಜಧಾನಿ ನವದೆಹಲಿಯಲ್ಲೂ ಶನಿವಾರ ಭೂಮಿ ಕಂಪಿಸಿದ ಅನುಭವವಾಗಿದೆ. ಕಟ್ಟಡಗಳು ಅಲುಗಾಡಿದ್ದರಿಂದ ಆತಂಕಗೊಂಡ ಜನರು ಮನೆ, ಕಚೇರಿಗಳಿಂದ ಹೊರ ಓಡಿ ಬಂದಿದ್ದಾರೆ.

ADVERTISEMENT

ಜಪಾನಿನಲ್ಲಿ ಸಂಭವಿಸಿರುವ ಪ್ರಬಲ ಕಂಪನದಿಂದಾಗಿ ನಗರದಲ್ಲಿ ಲಘು ಕಂಪನವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.