ADVERTISEMENT

‘ಡಬ್ಲ್ಯುಟಿಒ’ ಸಭೆಗೆ ಭಾರತ ಆತಿಥ್ಯ

ಸದಸ್ಯ ದೇಶಗಳ ಸಚಿವರ ಮಟ್ಟದ ಎರಡು ದಿನಗಳ ಅನೌಪಚಾರಿಕ ಚರ್ಚೆ

ಪಿಟಿಐ
Published 19 ಮಾರ್ಚ್ 2018, 20:33 IST
Last Updated 19 ಮಾರ್ಚ್ 2018, 20:33 IST
ರಾಬರ್ಟ್‌ ಅಜೆವೆಡೊ
ರಾಬರ್ಟ್‌ ಅಜೆವೆಡೊ   

ನವದೆಹಲಿ: ವಿಶ್ವ ವ್ಯಾಪಾರ ಸಂಘಟನೆಯ (ಡಬ್ಲ್ಯುಟಿಒ) ಸದಸ್ಯ ದೇಶಗಳ ಸಚಿವರ ಮಟ್ಟದ ಅನೌಪಚಾರಿಕ ಸಭೆಗೆ ಭಾರತ ಆತಿಥ್ಯ ವಹಿಸಿದೆ.

ಸೋಮವಾರ ಮತ್ತು ಮಂಗಳವಾರ (ಮಾ. 19 ರಿಂದ 20) ನಡೆಯಲಿರುವ ಸಭೆಯಲ್ಲಿ 50 ದೇಶಗಳ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.

ಈ ಸಭೆಯಲ್ಲಿ ಚರ್ಚಿಸುವ ವಿಷಯಗಳ ನಿರ್ದಿಷ್ಟ ಕಾರ್ಯಸೂಚಿ ನಿಗದಿಪಡಿಸಿಲ್ಲ. ಭಾರತದ ರಫ್ತು ಉತ್ತೇಜನಾ ಕ್ರಮಗಳ ವಿರುದ್ಧ ಅಮೆರಿಕವು ‘ಡಬ್ಲ್ಯುಟಿಒ’ಗೆ ದೂರು ನೀಡಿರುವ ಮತ್ತು ಉಕ್ಕು ಹಾಗೂ ಅಲ್ಯುಮಿನಿಯಂ ಆಮದು ನಿರ್ಬಂಧಿಸಿ ಗರಿಷ್ಠ ತೆರಿಗೆ ವಿಧಿಸಿರುವ ಕಾರಣಕ್ಕೆ ಈ ಸಭೆಗೆ ಮಹತ್ವ ಒದಗಿದೆ. ‘ಬಹುಪಕ್ಷೀಯ ವ್ಯಾಪಾರ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಮುಂದುವರೆಸಿಕೊಂಡು ಹೋಗಲು ಇಲ್ಲಿ ನಡೆಯುತ್ತಿರುವ ಸಚಿವರ ಅನೌಪಚಾರಿಕ ಸಭೆಯು ನೆರವಾಗಲಿದೆ ಎಂದು ವಿಶ್ವ ವ್ಯಾಪಾರ ಸಂಘಟನೆಯ (ಡಬ್ಲ್ಯುಟಿಒ) ಮಹಾ ನಿರ್ದೇಶಕ ರಾಬರ್ಟ್‌ ಅಜೆವೆಡೊ ಹೇಳಿದ್ದಾರೆ.

ADVERTISEMENT

‘ಡಬ್ಲ್ಯುಟಿಒ ಒಳಗೆ ಮತ್ತು ಹೊರಗೆ ನಾವು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದೇವೆ. ಸದ್ಯದ ಸಂದರ್ಭದಲ್ಲಿ ಜಾಗತಿಕ ವಾಣಿಜ್ಯ ವಹಿವಾಟು ಹಲವಾರು ಗಂಡಾಂತರಗಳನ್ನು ಒಳಗೊಂಡಿದೆ. ಈ ಅನೌಪಚಾರಿಕ ಸಭೆಯಲ್ಲಿ ನಾವು ಪ್ರಾಮಾಣಿಕತೆಯಿಂದ ನಮ್ಮೆಲ್ಲ ಸಮಸ್ಯೆಗಳನ್ನು ಚರ್ಚಿಸಲು ಇಷ್ಟಪಡುತ್ತೇವೆ. ಇಲ್ಲಿನ ಫಲಿತಾಂಶವು ಜಿನಿವಾದಲ್ಲಿ ನಾವು ಮಾತುಕತೆ ಮುಂದುವರೆಸಲು ನೆರವಾಗಲಿದೆ.

‘ಅಮೆರಿಕವು ವ್ಯಾಪಾರ ಸಂಧಾನ ಮಾತುಕತೆಗಳನ್ನು ಬೆಂಬಲಿಸುತ್ತದೆ. ಜಾಗತಿಕ ವ್ಯಾಪಾರ ಸಂಘಟನೆಗಳು ಸಾಗುತ್ತಿರುವ ಮಾರ್ಗದ ಬಗ್ಗೆ ಮಾತ್ರ ಅದಕ್ಕೆ ಕೆಲ ತಕರಾರುಗಳು ಇವೆ. 1995ರಲ್ಲಿ ಡಬ್ಲ್ಯುಟಿಒ ಅಸ್ತಿತ್ವಕ್ಕೆ ಬಂದ ನಂತರದ ದಿನಗಳಲ್ಲಿ ವಿಶ್ವ ಬದಲಾಗಿದೆ. ಹೀಗಾಗಿ ಜಿನಿವಾದ ಈ ಸಂಘಟನೆಯ ಸ್ವರೂಪದಲ್ಲಿ ಕೆಲ ಬದಲಾವಣೆಗಳನ್ನು ಮಾಡಬೇಕಾಗಿದೆ. ಸುಧಾರಣೆಗಳನ್ನು ಕಾರ್ಯಗತಗೊಳಿಸಬೇಕಾಗಿದೆ ಎನ್ನುವುದು ಅಮೆರಿಕದ ಧೋರಣೆಯಾಗಿದೆ.

ಸಮಾವೇಶ ಮುಕ್ತ ಚರ್ಚೆಗೆ ಹಾದಿ ಮಾಡಿಕೊಡಲಿದೆ. ಕೆಲ ವಿವಾದಾತ್ಮಕ ವಿಷಯಗಳ ಬಗ್ಗೆ ರಾಜಕೀಯ ಮಾರ್ಗದರ್ಶನ ನೀಡಲಿದೆ ಎಂದು ಭಾರತದ ವಾಣಿಜ್ಯ ಸಚಿವಾಲಯ ನಿರೀಕ್ಷಿಸಿದೆ.

**

ವಿಶ್ವ ವ್ಯಾಪಾರ ಸಂಘಟನೆಯಲ್ಲಿ ಸುಧಾರಣೆಗಳು ನಡೆಯಬೇಕು ಎನ್ನುವುದು ಅಮೆರಿಕದ ಆಶಯವಾಗಿದೆ.

–ರಾಬರ್ಟ್‌ ಅಜೆವೆಡೊ, ‘ಡಬ್ಲ್ಯುಟಿಒ’ ಮಹಾ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.