ADVERTISEMENT

ಡೊನಾಲ್ಡ್‌ ಟ್ರಂಪ್– ಕಿಮ್‌ ಜಾಂಗ್‌ ‘ನರ್ಸರಿ ಮಕ್ಕಳಂತೆ’ ಕಿತ್ತಾಡುತ್ತಿದ್ದಾರೆ: ರಷ್ಯಾ

ಏಜೆನ್ಸೀಸ್
Published 23 ಸೆಪ್ಟೆಂಬರ್ 2017, 5:52 IST
Last Updated 23 ಸೆಪ್ಟೆಂಬರ್ 2017, 5:52 IST
ರಷ್ಯಾ ವಿದೇಶಾಂಗ ಸಚಿವ ಸೆರ್ಜೈ ಲಾವ್ರೊವ್. –ರಾಯಿಟರ್ಸ್‌ ಚಿತ್ರ
ರಷ್ಯಾ ವಿದೇಶಾಂಗ ಸಚಿವ ಸೆರ್ಜೈ ಲಾವ್ರೊವ್. –ರಾಯಿಟರ್ಸ್‌ ಚಿತ್ರ   

ಮಾಸ್ಕೋ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ನಡುವಣ ಮಾತಿನ ಸಮರವನ್ನು ಕುರಿತು, ‘ಇಬ್ಬರು ನಾಯಕರು ನರ್ಸರಿ ಮಕ್ಕಳಂತೆ ಕಿತ್ತಾಡುತ್ತಿದ್ದಾರೆ’ ಎಂದು ರಷ್ಯಾ ವಿದೇಶಾಂಗ ಸಚಿವ ಸೆರ್ಜೈ ಲಾವ್ರೊವ್ ಹೇಳಿದ್ದಾರೆ.

ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಭಾಷಣ ಮಾಡಿದ್ದ ಡೊನಾಲ್ಡ್‌ ಟ್ರಂಪ್‌, ‘ಪರಮಾಣು ಕಾರ್ಯಕ್ರಮಗಳಿಂದ ಹಿಂದೆ ಸರಿಯದಿದ್ದರೆ ಉತ್ತರ ಕೊರಿಯಾವನ್ನು ಸಂಪೂರ್ಣ ನಾಶಮಾಡುತ್ತೇವೆ’ ಎಂದು ಬೆದರಿಕೆ ಹಾಕಿದ್ದರು. ಜತೆಗೆ ಕಿಮ್‌ ಅವರನ್ನು ‘ರಾಕೆಟ್‌ ಮ್ಯಾನ್‌’ ಎಂದು ಉಲ್ಲೇಖಿಸಿದ್ದರು.

ಟ್ರಂಪ್‌ ಹೇಳಿಕೆಗೆ ಪ್ರತಿಯಾಗಿ ಕಿಮ್‌ ಜಾಂಗ್‌, ‘ಹಾಗೊಮ್ಮೆ ಅಂತಹ ನಿರ್ಧಾರ ತೆಗೆದುಕೊಂಡರೆ, ಅದಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದರು. ‘ಮಾನಸಿಕ ಅಸ್ವಸ್ಥ’ನಂತಿರುವ ಅಮೆರಿಕದ ಅಧ್ಯಕ್ಷರು ವಿಶ್ವಸಂಸ್ಥೆಯ ವೇದಿಕೆಯಲ್ಲಿ ಸಾರ್ವಭೌಮ ರಾಷ್ಟ್ರವನ್ನು ಸಂಪೂರ್ಣ ನಾಶಮಾಡುವುದಾಗಿ ತಿಳಿಸಿರುವುದು ಅನೈತಿಕವಾದುದು ಎಂದು ಆರೋಪಿಸಿದ್ದರು.

ADVERTISEMENT

ಇದರಿಂದ ಕೆರಳಿದ ಟ್ರಂಪ್‌, ಕೊರಿಯಾ ನಾಯಕನನ್ನು ‘ಹುಚ್ಚು ಮನುಷ್ಯ’ ಎಂದು ಟ್ವೀಟ್‌ ಮಾಡಿದ್ದರು. ಉಭಯ ನಾಯಕರ ಈ ರೀತಿಯ ಮಾತಿನ ಸಮರ ಜಾಗತಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.

ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿರುವ ರಷ್ಯಾ ವಿದೇಶಾಂಗ ಸಚಿವ, ‘ಕೋಪದಿಂದ ಕೂಡಿರುವ ಇಬ್ಬರೂ ನಾಯಕರು ಕೆಲ ಸಮಯ ಶಾಂತವಾಗಿರುವುದು ಒಳಿತು’ ಎಂದು ಸಲಹೆ ನೀಡಿದ್ದಾರೆ.

‘ಹೌದು, ಉ.ಕೊರಿಯಾದ ಅಣ್ವಸ್ತ್ರ ಪರೀಕ್ಷೆ ಕ್ರಮಗಳನ್ನು ನೋಡುತ್ತಾ ಸುಮ್ಮನೆ ಕುಳಿತುಕೊಳ್ಳುವುದು ಅಸಾಧ್ಯ. ಆದರೆ, ಅದರ ಮೇಲೆ ಯುದ್ಧ ಮಾಡುವುದನ್ನು ಕೂಡ ಒಪ್ಪಲಾಗದು’ ಎಂದು ಹೇಳಿದ್ದಾರೆ.

‘ಈ ವಿಚಾರವನ್ನು ನಾವು ಸಮಂಜಸವಾದ ರೀತಿಯಲ್ಲಿ ಪರಿಹರಿಸಿಕೊಳ್ಳಬೇಕಾಗಿದೆ. ಭಾವನಾತ್ಮಕಾವಾಗಿ ಕಿತ್ತಾಡಿಕೊಳ್ಳವ ನರ್ಸರಿ ಮಕ್ಕಳನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.