ADVERTISEMENT

ತಂದೆಯ ತಾಯ್ನಾಡಿಗೆ ಒಬಾಮ

ನೈರೋಬಿಗೆ ಮೊದಲ ಭೇಟಿ ನೀಡಿದ ಅಮೆರಿಕ ಅಧ್ಯಕ್ಷರಿಗೆ ಅದ್ದೂರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 25 ಜುಲೈ 2015, 19:30 IST
Last Updated 25 ಜುಲೈ 2015, 19:30 IST

ನೈರೋಬಿ (ಎಪಿ‌/ಎಎಫ್‌ಪಿ): ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ಬರಾಕ್‌ ಒಬಾಮ ಶನಿವಾರ ತಂದೆಯ ತಾಯ್ನಾಡು ಕೀನ್ಯಾಕ್ಕೆ ಭೇಟಿ ನೀಡಿದರು. ಇಲ್ಲಿಗೆ ಬಂದಿಳಿದ ಒಬಾಮ ಅವರಿಗೆ ಅದ್ದೂರಿ ಸ್ವಾಗತ ನೀಡಲಾಯಿತು. ಕೀನ್ಯಾ ಅಧ್ಯಕ್ಷ ಉಹುರು ಕೆನ್ಯಾಟ್ಟಾ ಒಬಾಮ ಅವರನ್ನು ಬರಮಾಡಿಕೊಂಡರು.

ಅಮೆರಿಕ ಅಧ್ಯಕ್ಷರು ಸಂಚರಿಸುವ ಮಾರ್ಗದ ಉದ್ದಕ್ಕೂ ನಾಗರಿಕರು ಅಮೆರಿಕ ಮತ್ತು ಕೀನ್ಯಾದ ಧ್ವಜ ಹಿಡಿದು ನಿಂತಿದ್ದರು. ‘ಕೀನ್ಯಾಕ್ಕೆ ಭೇಟಿ ನೀಡಿರುವ ಮೊದಲ ಅಮೆರಿಕ ಅಧ್ಯಕ್ಷನಾಗಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ನನ್ನ ತಂದೆ ಇದೇ ಭಾಗಕ್ಕೆ ಸೇರಿದವರು’ ಎಂದು ಒಬಾಮ ಹೇಳಿದ್ದಾರೆ. 

ಒಬಾಮ  ಹಿರಿಯ ಅಜ್ಜಿಯೊಂದಿಗೆ ಸಮಯವನ್ನು ಕಳೆದರು. ಒಬಾಮ ಅವರನ್ನು ನೋಡಲು ಅವರು ಈಗಾಗಲೇ ತಮ್ಮ ಸ್ವಗ್ರಾಮದಿಂದ ನೈರೋಬಿಗೆ ಬಂದಿದ್ದಾರೆ. ಇಲ್ಲಿ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು.  ವಿಮಾನ ಹಾರಾಟವನ್ನೂ   ನಿಲ್ಲಿಸಲಾಗಿತ್ತು. ಭಾನುವಾರ ಒಬಾಮ ಇಥಿಯೋಪಿಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ನೋಡಿದ್ದೇನೆ ಎಂದಿರುವ ಒಬಾಮ ದಶಕಗಳ ಹಿಂದೆ ನೋಡಿದ್ದಕ್ಕಿಂತ ವಿಭಿನ್ನವಾಗಿ ನಗರ ಕಾಣುತ್ತಿದೆ ಎಂದು  ಅಲ್ಲಿಯ ಬೆಳವಣಿಗೆಯನ್ನು ಶ್ಲಾಘಿಸಿದ್ದಾರೆ. ಒಬಾಮ ತಂದೆ ನೈರೋಬಿಯಲ್ಲಿ 1982 ರಲ್ಲಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು.

ಆಫ್ರಿಕಾ ಪ್ರಗತಿಗೆ ಮೆಚ್ಚುಗೆ : ಕೀನ್ಯಾದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಒಬಾಮ ಆಫ್ರಿಕಾ ಪ್ರಗತಿಯ ಹಾದಿಯಲ್ಲಿದೆ ಎಂದು ಅಲ್ಲಿನ ಉದ್ಯಮಶೀಲತೆಯ ಉತ್ಸಾಹವನ್ನು ಹೊಗಳಿದ್ದಾರೆ. ‘ಆಫ್ರಿಕಾ  ಪ್ರಗತಿಯ ಹಾದಿಯಲ್ಲಿರುವುದರಿಂದ ನಾನು ಇಲ್ಲಿಗೆ ಬರಲು ಸಾಧ್ಯವಾಗಿದೆ. ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ವಲಯಗಳಲ್ಲಿ ಆಫ್ರಿಕಾ  ಒಂದಾಗಿದೆ’ ಎಂದು ಒಬಾಮ ಹೇಳಿದ್ದಾರೆ.

‘ಈ ವಲಯದ ಜನರ ಜೀವನಮಟ್ಟ ಸುಧಾರಿಸಿದೆ. ಆದಾಯ ಹೆಚ್ಚಿದೆ. ಮಧ್ಯಮ ವರ್ಗ ಅಭಿವೃದ್ಧಿ ಹೊಂದುತ್ತಿದೆ. ಆಫ್ರಿಕಾದ ವ್ಯಾಪಾರದ ಗತಿ ಬದಲಾಯಿಸಲು ಯುವಕರು ತಂತ್ರಜ್ಞಾನ ಬಳಸುತ್ತಿದ್ದಾರೆ’ ಎಂದು  ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.