ADVERTISEMENT

ತವರು ಸೇರುವ ಉಜ್ಮಾ ಕನಸು ನನಸು

ಭಾರತಕ್ಕೆ ಮರಳಲು ಇಸ್ಲಾಮಾಬಾದ್‌ ಹೈಕೋರ್ಟ್‌ ಅನುಮತಿ

ಪಿಟಿಐ
Published 24 ಮೇ 2017, 19:39 IST
Last Updated 24 ಮೇ 2017, 19:39 IST
ಉಜ್ಮಾ
ಉಜ್ಮಾ   

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದ ನವದೆಹಲಿಯ ಮಹಿಳೆ ತವರಿಗೆ ಮರಳಲು ಇಸ್ಲಾಮಾಬಾದ್‌ ಹೈಕೋರ್ಟ್‌ ಅನುಮತಿ ನೀಡಿದೆ.

ಪಾಕಿಸ್ತಾನದ ತಾಹೀರ್‌ ಅಲಿ ಅವರು ಬಲವಂತದಿಂದ ತನ್ನನ್ನು ಮದುವೆಯಾಗಿದ್ದಾರೆ ಎಂದು ಆರೋಪಿಸಿದ್ದ 20 ವರ್ಷದ ಉಜ್ಮಾ,  ಭಾರತಕ್ಕೆ ಮರಳಲು ಅವಕಾಶ ನೀಡಬೇಕು ಎಂದು ಕೋರಿ ಮೇ 12ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

‘ನನ್ನ ಮಗಳು ತಲಸ್ಸೇಮಿಯಾದಿಂದ ಬಳಲುತ್ತಿದ್ದಾಳೆ. ತಕ್ಷಣವೇ ನಾನು ತವರಿಗೆ ಮರಳಬೇಕಾಗಿದೆ’ ಎಂದು ಅರ್ಜಿಯಲ್ಲಿ ತಿಳಿಸಿದ್ದ ಉಜ್ಮಾ, ಇದಕ್ಕೆ ಸಂಬಂಧಿಸಿದ ವೈದ್ಯಕೀಯ ವರದಿಯನ್ನು ಸಲ್ಲಿಸಿದ್ದರು.

ಪತ್ನಿಯನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಕೋರಿ ಅಲಿ ಕೂಡ  ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

‘ಉಜ್ಮಾ ಯಾವಾಗ ಬೇಕಾದರೂ ತವರಿಗೆ ಮರಳಲು ಸ್ವತಂತ್ರರು. ವಾಘಾ ಗಡಿಯವರೆಗೆ ಅವರಿಗೆ ಪೊಲೀಸ್‌ ಭದ್ರತೆ ಒದಗಿಸಲಾಗುವುದು’
ಎಂದು  ನ್ಯಾಯಮೂರ್ತಿ ಮೊಹಸೀನ್‌ ಅಖ್ತರ್‌ ಕಿಯಾನಿ ಹೇಳಿದ್ದಾರೆ ಎಂದು ‘ಡಾನ್‌’ ಪತ್ರಿಕೆ ವರದಿ ಮಾಡಿದೆ.

‘ನೀವು ನಿಮ್ಮ ಪತಿಯನ್ನು ಭೇಟಿ ಮಾಡಲು ಇಚ್ಛಿಸುವಿರಾ’ ಎಂದು ನ್ಯಾಯಮೂರ್ತಿಗಳು ಉಜ್ಮಾ ಅವರನ್ನು ಕೇಳಿದರು. ಅದನ್ನು ಉಜ್ಮಾ  ನಿರಾಕರಿಸಿದ್ದಾರೆ.

ಮಲೇಷ್ಯಾದಲ್ಲಿ ಭೇಟಿಯಾಗಿದ್ದ ಉಜ್ಮಾ ಮತ್ತು ಅಲಿ ನಡುವೆ ಪ್ರೇಮಾಂಕುರವಾಗಿತ್ತು, ಬಳಿಕ ವಾಘಾ ಗಡಿಯ ಮೂಲಕ ಮೇ 1ರಂದು ಪಾಕಿಸ್ತಾನಕ್ಕೆ ಬಂದಿದ್ದ ಅವರು, ಮೇ 3ರಂದು ವಿವಾಹವಾಗಿದ್ದರು ಎಂದು ವರದಿಗಳು ತಿಳಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT