ADVERTISEMENT

ತಾಲಿಬಾನ್‌ ಆತ್ಮಾ ಹುತಿ ದಾಳಿ: 37 ಸಾವು

ಆಫ್ಘಾನಿಸ್ತಾನದಲ್ಲಿ ಉಗ್ರರ ದುಷ್ಕೃತ್ಯ: ಪೊಲೀಸ್‌ ವಾಹನಗಳ ಮೇಲೆ ಗುರಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2016, 23:30 IST
Last Updated 30 ಜೂನ್ 2016, 23:30 IST
ಕಾಬೂಲ್‌ನಲ್ಲಿ ಗುರುವಾರ ನಡೆದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ಜಖಂಗೊಂಡಿರುವ ಬಸ್‌ನ ಅವಶೇಷಗಳನ್ನು ಭದ್ರತಾ ಸಿಬ್ಬಂದಿ ಪರಿಶೀಲಿಸಿದರು   ರಾಯಿಟರ್ಸ್‌ ಚಿತ್ರ
ಕಾಬೂಲ್‌ನಲ್ಲಿ ಗುರುವಾರ ನಡೆದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ಜಖಂಗೊಂಡಿರುವ ಬಸ್‌ನ ಅವಶೇಷಗಳನ್ನು ಭದ್ರತಾ ಸಿಬ್ಬಂದಿ ಪರಿಶೀಲಿಸಿದರು ರಾಯಿಟರ್ಸ್‌ ಚಿತ್ರ   

ಕಾಬೂಲ್‌ (ಎಪಿ): ತರಬೇತಿ ಪೊಲೀಸ್‌ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬಸ್‌ಗಳ ಮೇಲೆ ಗುರುವಾರ ನಡೆದ ಅವಳಿ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ 37 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 40 ಜನರು ಗಾಯಗೊಂಡಿದ್ದಾರೆ ಎಂದು ಆಫ್ಘಾನಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ.

ಕಾಬೂಲ್‌ನಿಂದ 20 ಕಿ. ಮೀ ದೂರದ ಪಘ್ಮನ್‌ ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ ಸ್ಥಳೀಯ ಕಾಲಮಾನ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ತರಬೇತಿ ಪೊಲೀಸರು ಇದ್ದ ಎರಡು ಬಸ್‌ಗಳನ್ನು ಗುರಿಯಾಗಿಸಿಕೊಂಡು ಉಗ್ರನೊಬ್ಬ  ಮೊದಲ ಆತ್ಮಾಹುತಿ ದಾಳಿ ನಡೆಸಿದನು. ಆಗ ನೆರವಿಗಾಗಿ ಸ್ಥಳಕ್ಕೆ ಧಾವಿಸಿ ಬಂದ ಜನರು ಹಾಗೂ ಮೂರನೇ ಬಸ್‌ ಅನ್ನು ಗುರಿಯಾಗಿಸಿಟ್ಟುಕೊಂಡು ಮತ್ತೊಬ್ಬ ಉಗ್ರ ದಾಳಿ ನಡೆಸಿದ್ದಾನೆ ಎಂದು ಪಘ್ಮನ್‌ ಜಿಲ್ಲೆಯ ಗವರ್ನರ್‌ ಮೌಸ ರೆಹಮತಿ ಹೇಳಿದ್ದಾರೆ.

ವಾರ್ಡಕ್‌ ಪ್ರಾಂತ್ಯದ ಕೇಂದ್ರದಲ್ಲಿ ತರಬೇತಿ ಪಡೆದು ಅವರೆಲ್ಲ ವಾಪಸ್ಸಾಗುತ್ತಿದ್ದರು. ‘ದಾಳಿ ನಡೆದ ಸ್ಥಳದಲ್ಲಿ ಭಾರಿ ಸ್ಫೋಟ ನಡೆದ ವರದಿಯಾಗಿದೆ.  ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಿಲ್ಲ’ ಎಂದು ಆಫ್ಘಾನಿಸ್ತಾನದ ಗೃಹ ಸಚಿವಾಲಯ ತಿಳಿಸಿದೆ. ‘ಮಾನವೀಯತೆ ಮೇಲೆ ನಡೆದ ದಾಳಿ’ ಎಂದು  ಆಫ್ಘಾನಿಸ್ತಾನದ ಅಧ್ಯಕ್ಷ ಆಶ್ರಫ್‌ ಘನಿ ಹೇಳಿದ್ದು, ಘಟನೆ ಬಗ್ಗೆ ತನಿಖೆ ನಡೆಸುವಂತೆ ಗೃಹ ಸಚಿವಾಲಯಕ್ಕೆ ಸೂಚಿಸಿದ್ದಾರೆ.

ಕಾಬೂಲ್‌ನಲ್ಲಿನ ಅಮೆರಿಕ ರಾಯಭಾರ ಕಚೇರಿಯು ಘಟನೆಯನ್ನು ಖಂಡಿಸಿದೆ. ಆಫ್ಘಾನಿಸ್ತಾನದಲ್ಲಿ ಕೆಲಸ ಮಾಡಲು ನೇಪಾಳವು ತನ್ನ ದೇಶದ ನಾಗರಿಕರಿಗೆ ನಿಷೇಧ ಹೇರಿದ್ದರಿಂದ ಜೂನ್‌ 20ರಂದು ಆಫ್ಘಾನಿಸ್ತಾನದಲ್ಲಿ ಬಸ್‌ನಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ 14  ಮಂದಿ ನೇಪಾಳಿಯರು ಸಾವಿಗೀಡಾಗಿದ್ದರು.

ಹೊಣೆ ಹೊತ್ತ ತಾಲಿಬಾನ್
ತಾಲಿಬಾನ್‌ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ತಾಲಿಬಾನ್‌ ವಕ್ತಾರ ಝಬಿಹುಲ್ಲಾ ಮುಜಾಹಿದ್‌ ‘ಎಪಿ’ ಸುದ್ದಿಸಂಸ್ಥೆಗೆ ಇ–ಮೇಲ್‌ ಮೂಲಕ ಸ್ಪಷ್ಟಪಡಿಸಿದ್ದಾನೆ.

ಇಬ್ಬರು ಆತ್ಮಾಹುತಿ ಉಗ್ರರು ಈ ದಾಳಿ ನಡೆಸಿದ್ದಾರೆ.  ತರಬೇತಿ ಪೊಲೀಸ್‌ ಸಿಬ್ಬಂದಿ ಹಾಗೂ ತರಬೇತುದಾರರು ಪ್ರಯಾಣಿಸುತ್ತಿದ್ದ ಬಸ್ಸನ್ನು ಗುರಿಯಾಗಿಸಿಕೊಂಡು ಮೊದಲ ದಾಳಿ ನಡೆಸಲಾಗಿದೆ. ಎರಡನೇ ದಾಳಿ 20 ನಿಮಿಷದ ಬಳಿಕ ನಡೆದಿದ್ದು, ಪೊಲೀಸರು ನೆರವಿಗಾಗಿ ಸ್ಥಳಕ್ಕೆ ಧಾವಿಸಿದಾಗ ಈ ಘಟನೆ ನಡಿದಿದೆ ಎಂದು ಮುಜಾಹಿದ್‌ ಹೇಳಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT