ADVERTISEMENT

ತುತ್ತು ಅನ್ನ, ಗುಟುಕು ನೀರಿಗೂ ತತ್ವಾರ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2015, 19:39 IST
Last Updated 29 ಏಪ್ರಿಲ್ 2015, 19:39 IST

ಕಠ್ಮಂಡು: ಮಕ್ಕಳು, ಮಹಿಳೆಯರು, ವೃದ್ಧರು ಗುಟುಕು ನೀರಿಗಾಗಿ, ತುತ್ತು ಅನ್ನಕ್ಕಾಗಿ ಹೋರಾಡುತ್ತಿದ್ದಾರೆ. ಹಸುಳೆಗಳು ಹಾಲು ಕಾಣದೆ ಕಂಗಾಲಾಗಿವೆ. ‘ಸಮುದ್ರದ ನೆಂಟು, ಉಪ್ಪಿಗೆ ಬರ’ ಎನ್ನುವಂತೆ ಕೂಗಳತೆ ದೂರದಲ್ಲಿ ನದಿ ಹರಿದರೂ ನೀರು ಕುಡಿಯಲು ಬರುವುದಿಲ್ಲ.

2 ಗ್ರಾಮಗಳ ಹೆಣಗಳು ಮಾತ್ರವಲ್ಲ, ದುರಂತದಲ್ಲಿ ಜೀವ ಕಳೆದುಕೊಂಡ ಸಾವಿರಾರು ದೇಹಗಳನ್ನು ನದಿ ತಟದಲ್ಲಿ ಸುಡಲಾಗಿದೆ. ಆ ನೀರು ಕುಡಿದರೆ ರೋಗ ಬರುತ್ತದೆ ಎಂಬ ಅಂಜಿಕೆ ಹಳ್ಳಿಗರಿಗಿದೆ. ದುರಂತ ಸಂಭವಿಸಿ ಐದು ದಿನಗಳೇ ಕಳೆದರೂ ಅವರ ನೆರವಿಗೆ ಯಾರೂ ಧಾವಿಸಿಲ್ಲ.

ಪರಿಹಾರ ಕಾರ್ಯವಂತೂ ದೂರದ ಮಾತು. ಈವರೆಗೆ ಯಾವೊಬ್ಬ ಅಧಿಕಾರಿ ಅವರ ಕಡೆ ಸುಳಿದಿಲ್ಲ. ಪೊಲೀಸರು, ಮಿಲಿಟರಿ ಅಧಿಕಾರಿಗಳು, ಸಿಬ್ಬಂದಿಯೂ ಅತ್ತ ತಲೆ ಹಾಕಿಲ್ಲ. ಹೊಸಬರು ಯಾರೇ ಬಂದರೂ ರಸ್ತೆ ಬದಿಯಲ್ಲಿ ನಿಂತ ಅಸಹಾಯಕ ಜನ ಆಸೆಗಣ್ಣಿನಿಂದ ನೋಡುತ್ತಾರೆ. ನಮ್ಮ ಸಹಾಯಕ್ಕೆ ಬಂದವರೆಂದು ತಿಳಿಯುತ್ತಾರೆ.

ಥೋಟರ್‌ ಮತ್ತು ಸಿಪಾಘಾಟ್‌ನಲ್ಲಿದ್ದ ಒಟ್ಟು ಮನೆಗಳ ಸಂಖ್ಯೆ ಸುಮಾರು 250.  ಜನಸಂಖ್ಯೆ 2 ಸಾವಿರ ಇರಬಹುದು. ಬಹುತೇಕರ ಕಸುಬು ಕೃಷಿ.  ಹಸಿವಿನಿಂದ ರೋದಿಸುತ್ತಿದ್ದ ಮಕ್ಕಳಿಗೆ ಅಳಿದುಳಿದ ವಸ್ತುಗಳಿಂದ ಊಟ ಬೇಯಿಸಿಕೊಟ್ಟಿದ್ದಾರೆ. ಅವರದ್ದು ಈಗ ಖಾಲಿ ಕೈ.

‘ನಮ್ಮ ಊರಿಗೆ ಇನ್ನೂ ಯಾರೂ ಬಂದಿಲ್ಲ. ಒಂದು ಕಾಳೂ ಆಹಾರಧಾನ್ಯ ಸಿಕ್ಕಿಲ್ಲ. ಸತ್ತವರಿಗೂ ಪರಿಹಾರವಿಲ್ಲ. ಅವೆಲ್ಲವೂ ಹೋಗಲಿ ಬಿಡಿ, ಕನಿಷ್ಠ ಪಕ್ಷ ಕುಡಿಯುವ ನೀರಾದರೂ ಬೇಡವೇ. ನಮ್ಮ ಗೋಳನ್ನು ಯಾರಿಗೆ ಹೇಳಿಕೊಳ್ಳುವುದು’ ಎಂದು 25 ವರ್ಷದ ಧೋಟರ್‌ನ ಬ್ರಿನ್‌ ಮಾಥೂರ್‌ ಮಾಂಝಿ ಅಲವತ್ತುಕೊಂಡರು.

ಅದೇ ಗ್ರಾಮದ ಮಧ್ಯವಯಸ್ಕ ಹರೇ ರಾಂ ಅವರದ್ದೂ ಅದೇ ದೂರು. ‘ಮನೆಯಲ್ಲಿ ಆರು ಮಂದಿ ಇದ್ದೇವೆ. ಮನೆ, ಮಠ ಕಳೆದುಕೊಂಡು ಬೀದಿಯಲ್ಲಿ ನಿಂತಿದ್ದೇವೆ. ಐದು ದಿನದಿಂದ ಯಾರೂ ನಮ್ಮ ಕಡೆ ತಿರುಗಿ ನೋಡದಿದ್ದರೆ ಬದುಕುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು.

ಸಿಪಾಘಾಟಿನ ಪ್ರೇಂ ಶ್ರೇಷ್ಠ, ಸಾನು ಶ್ರೇಷ್ಠ ಅವರೂ ಸರ್ಕಾರದ ಮೇಲೆ ತೀವ್ರ ಅಸಮಾಧಾನಗೊಂಡಿದ್ದಾರೆ. ಪದವಿ ಮುಗಿಸಿರುವ ಯುವಕ ಪ್ರೇಂ ಹಳ್ಳಿಗರ ನೆರವಿಗೆ ನಿಂತಿದ್ದಾರೆ. ಭೂಕಂಪದಿಂದ ಕಡಿಮೆ ಹಾನಿಗೊಳಗಾಗಿರುವ ಹಳ್ಳಿಗಳಿಗೆ ಹೋಗಿ ಕಾಡಿಬೇಡಿ ಆಹಾರ ಪದಾರ್ಥ
ಗಳನ್ನು ತಂದು ಮಕ್ಕಳು, ವೃದ್ಧರಿರುವ ಮನೆಗಳಿಗೆ ಹಂಚುತ್ತಿದ್ದಾರೆ.

ಇಂಗ್ಲಿಷ್‌ ಭಾಷೆ ಬಲ್ಲ ಯುವಕ, ‘ನೇಪಾಳಕ್ಕೆ ಹೊರ ದೇಶಗಳಿಂದ ಬೇಕಾದಷ್ಟು ನೆರವು ಹರಿದು ಬಂದಿದೆ. ಅದನ್ನು ಜನರಿಗೆ ಮುಟ್ಟಿಸಲು ಸರ್ಕಾರ ವಿಫಲವಾಗಿದೆ’ ಎಂದು ಆರೋಪಿಸಿದರು. ಅದೇ ಗ್ರಾಮದ ಗೃಹಿಣಿ ಸರಿತಾ ತಮ್ಮ ಕಂಕುಳಲ್ಲಿದ್ದ ಹಸುಳೆಯನ್ನು ತೋರಿಸಿ, ‘5 ದಿನ
ದಿಂದ ಮಗುವಿಗೆ ಹಾಲು ಕೊಟ್ಟಿಲ್ಲ’ ಎಂದು ಹೇಳಿ ನೊಂದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.