ADVERTISEMENT

ದುಬೈನಲ್ಲಿ ನಿರ್ಮಾಣವಾಗಲಿವೆ ಅವಳಿ ದ್ವೀಪಗಳು

​ಪ್ರಜಾವಾಣಿ ವಾರ್ತೆ
Published 15 ಮೇ 2017, 12:43 IST
Last Updated 15 ಮೇ 2017, 12:43 IST
ದುಬೈನಲ್ಲಿ ನಿರ್ಮಾಣವಾಗಲಿವೆ ಅವಳಿ ದ್ವೀಪಗಳು
ದುಬೈನಲ್ಲಿ ನಿರ್ಮಾಣವಾಗಲಿವೆ ಅವಳಿ ದ್ವೀಪಗಳು   

ದುಬೈ: ಸುಂದರ, ಸುಸಜ್ಜಿತ, ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿರುವ ಎರಡು ದ್ವೀಪಗಳನ್ನು ನಿರ್ಮಿಸಲು ದುಬೈ ಸಜ್ಜಾಗಿದೆ. ದ್ವೀಪಗಳನ್ನು ನಿರ್ಮಿಸಲಿರುವ ದುಬೈ ಸರ್ಕಾರದ ಮರ್ಸಾ ಅಲ್ ಅರಬ್ ಎಂಬ ಈ ಯೋಜನೆಯನ್ನು ಯುಎಇ ಆಡಳಿತಾಧಿಕಾರಿ ಶೇಖ್ ಮುಹಮ್ಮದ್ ಬಿನ್ ರಾಷೀದ್ ಅಲ್ ಮಕ್ತುಂ ಘೋಷಿಸಿದ್ದಾರೆ.

40 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಮರ್ಸಾ ಅಲ್ ಅರಬ್ ದ್ವೀಪ ನಿರ್ಮಾಣವಾಗಲಿದೆ. ಜಗತ್ತಿನ ಅತೀ ಸುಂದರ, ಐಷಾರಾಮಿ ಹೋಟೆಲ್ ಆಗಿರುವ ಬುರ್ಜ್ ಅಲ್ ಅರಬ್‍ ಜುಮೈರಾದ ಇಕ್ಕೆಲಗಳಲ್ಲಿ ಈ ಎರಡು ದ್ವೀಪಗಳು ನಿರ್ಮಾಣವಾಗಲಿದೆ. ಪ್ರವಾಸಿಗರನ್ನು ತಮ್ಮತ್ತ ಸೆಳೆಯಲು ಈ ದ್ವೀಪಗಳನ್ನು ನಿರ್ಮಿಸಲಾಗುತ್ತಿದ್ದು, 140 ಐಷಾರಾಮಿ ವಿಲ್ಲಾ ಮತ್ತು ಇನ್ನಿತರ ಸೌಲಭ್ಯಗಳು ಇಲ್ಲಿ ಲಭ್ಯವಾಗಲಿವೆ.  6.3 ಬಿಲಿಯನ್ ದಿರ್‍ಹಂ (11,000 ಕೋಟಿ ರೂಪಾಯಿ)ವೆಚ್ಚದ ಈ ಯೋಜನೆ 2020ರಲ್ಲಿ ಪೂರ್ಣಗೊಳ್ಳಲಿದೆ.

ಸಮುದ್ರ ಜೀವಿಗಳನ್ನು ಹತ್ತಿರದಿಂದ ವೀಕ್ಷಿಸಲು ಮತ್ತು ಅವುಗಳ ಬಗ್ಗೆ ಅಧ್ಯಯನ ನಡೆಸಲು ಸಹಾಯವಾಗುವ 1000 ಜನರಿಗೆ ಕುಳಿತುಕೊಳ್ಳಲು ಸೌಲಭ್ಯವಿರುವ ಮರೀನ್ ಪಾರ್ಕ್ ಇಲ್ಲಿ ನಿರ್ಮಾಣವಾಗಲಿದೆ. ಇಲ್ಲಿ ಅತೀ ಅಪರೂಪ ಮತ್ತು  ಪ್ರಾಚೀನ ಕಾಲದ ಮುತ್ತುಗಳನ್ನು ಪ್ರದರ್ಶಿಸುವ ಪರ್ಲ್ ಮ್ಯೂಸಿಯಂ ಕೂಡಾ ತಲೆ ಎತ್ತಲಿದೆ. 20,000 ಚದರ ಮೀಟರ್‍‌ಗಿಂತ ಹೆಚ್ಚಿನ ಸ್ಥಳವನ್ನು ವ್ಯಾಪಾರ ಮಳಿಗೆಗಳಿಗಾಗಿ ಮೀಸಲಿರಿಸಲಾಗಿದೆ.

ADVERTISEMENT

ಈ ಯೋಜನೆ ಮುಂದಿನ ತಿಂಗಳು ಆರಂಭವಾಗಲಿದ್ದು, ಈ ಮೂಲಕ ಉದ್ಯೋಗವಕಾಶಗಳೂ ಹೆಚ್ಚಲಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.