ADVERTISEMENT

ದ್ವೇಷಾಪರಾಧ ತಡೆಗೆ ಭಾರತೀಯರ ಮನವಿ

ಶ್ವೇತಭವನದ ಎದುರು ಭಾರತ ಮೂಲದ ಅಮೆರಿಕನ್ನರಿಂದ ರ್ಯಾಲಿ

ಪಿಟಿಐ
Published 20 ಮಾರ್ಚ್ 2017, 19:30 IST
Last Updated 20 ಮಾರ್ಚ್ 2017, 19:30 IST
ಭಾರತೀಯರ ಮೇಲೆ ನಡೆಯುತ್ತಿರುವ ದ್ವೇಷಾಪರಾಧ ಘಟನೆಗಳನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭಾರತ ಮೂಲದ ಅಮೆರಿಕನ್ನರು ಭಾನುವಾರ ಶ್ವೇತಭವನದ ಮುಂದೆ ರ್‍್ಯಾಲಿ ನಡೆಸಿದರು.  –ಪಿಟಿಐ ಚಿತ್ರ
ಭಾರತೀಯರ ಮೇಲೆ ನಡೆಯುತ್ತಿರುವ ದ್ವೇಷಾಪರಾಧ ಘಟನೆಗಳನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭಾರತ ಮೂಲದ ಅಮೆರಿಕನ್ನರು ಭಾನುವಾರ ಶ್ವೇತಭವನದ ಮುಂದೆ ರ್‍್ಯಾಲಿ ನಡೆಸಿದರು. –ಪಿಟಿಐ ಚಿತ್ರ   
ವಾಷಿಂಗ್ಟನ್‌:  ಇಸ್ಲಾಂಫೋಬಿಯಾ ಮತ್ತು ಪರಕೀಯತೆಯ ದ್ವೇಷಕ್ಕೆ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಗುರಿಯಾಗುತ್ತಿದ್ದಾರೆ.   ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಧ್ಯ ಪ್ರವೇಶ ಮಾಡಿ ಇದನ್ನು ತಡೆಯಬೇಕು ಎಂದು ಅಮೆರಿಕದಲ್ಲಿರುವ ಭಾರತೀಯ ಸಮುದಾಯದವರು ಆಗ್ರಹಿಸಿದ್ದಾರೆ. 
 
ಅಮೆರಿಕದಲ್ಲಿ ನೆಲೆಸಿರುವ ಭಾರತ ಮೂಲದವರು, ಅದರಲ್ಲೂ ಹಿಂದೂ ಮತ್ತು ಸಿಖ್ಖರು ಇಸ್ಲಾಂಫೋಬಿಯಾ ಮತ್ತು  ದ್ವೇಷಕ್ಕೆ ಬಲಿಯಾಗುತ್ತಿರುವುದನ್ನು ಖಂಡಿಸಿ ಭಾರತೀಯ ಸಮುದಾಯದವರು ಶ್ವೇತ ಭವನದ ಎದುರು ಭಾನುವಾರ  ರ್ಯಾಲಿ ನಡೆಸಿದರು. 
 
‘ಇಸ್ಲಾಂ ಫೋಬಿಯಾದಿಂದಾಗಿ ಹಿಂದೂ­­ಗಳ ಮೇಲೆ ದಾಳಿ ನಡೆಸಲಾಗುತ್ತಿದೆ.  ಮುಂದೆ ಇಡೀ ಭಾರತೀಯ ಸಮುದಾಯವೇ ಇದಕ್ಕೆ  ಬಲಿಪಶು ಆಗಬೇಕಾಗುತ್ತದೆ’ ಎಂದು ವರ್ಜಿನಿಯಾ ಮೂಲದ ವಕೀಲ ವಿಂಧ್ಯಾ ಅಡಪ ಹೇಳಿದ್ದಾರೆ.
 
‘ದ್ವೇಷಾಪರಾಧದ ವಿರುದ್ಧ ಜಾಗೃತಿ ಮೂಡಿಸಲು ನಾವು ಇಲ್ಲಿ ಸೇರಿದ್ದೇವೆ. ಇದು ಟ್ರಂಪ್‌ ಆಡಳಿತದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಅಲ್ಲ. ದ್ವೇಷಾಪರಾಧದ ವಿರುದ್ಧ ಪಕ್ಷಾತೀತ ಬೆಂಬಲ ಪಡೆಯಲು ರ್ಯಾಲಿ ಹಮ್ಮಿಕೊಂಡಿದ್ದೇವೆ’ ಎಂದು ಅವರು ತಿಳಿಸಿದ್ದಾರೆ. 
 
‘ಅರಬ್‌ ಮತ್ತು ಮುಸ್ಲಿಂ ಎಂದು ತಪ್ಪಾಗಿ ಗ್ರಹಿಸಿ ಭಾರತ ಮೂಲದ ಟೆಕಿ­ಯನ್ನು ಕನ್ಸಾಸ್‌ ನಗರದಲ್ಲಿ ಹತ್ಯೆ ಮಾಡಲಾಗಿತ್ತು. ಸದ್ಯದ ರಾಜಕೀಯ ವಾತಾವರಣ ನೋಡಿದರೆ ಅಮೆರಿಕದಲ್ಲಿರುವ ಭಾರತ ಮೂಲದ ಅಮೆರಿಕನ್ನರು ಸೇರಿದಂತೆ ಎಲ್ಲರ ಮೇಲೆ ಈ ರೀತಿಯ ದಾಳಿ ನಡೆಯಲಿದೆ
ಎಂದೆನಿಸುತ್ತಿದೆ’ ಎಂದು ಭಾರತ ಮೂಲದ ವೈದ್ಯ  ಎಸ್‌. ಶೇಷಾದ್ರಿ ಹೇಳಿದ್ದಾರೆ.  
 
ದ್ವೇಷ ಭಾವನೆಯನ್ನು ಕಿತ್ತು ಹಾಕಲು ಕ್ರಮ ಕೈಗೊಳ್ಳುವ ಮೂಲಕ ಭಾರತೀಯರ ಭಯ ಹೋಗಲಾಡಿಸಬೇಕು ಎಂದು ಪ್ರತಿ ಭಟನಾಕಾರರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.