ADVERTISEMENT

ನೀರಿನಡಿ 8ನೇ ಖಂಡ; ಜೀಲ್ಯಾಂಡಿಯಾ

ಆಸ್ಟ್ರೇಲಿಯ, ನ್ಯೂಜಿಲೆಂಡ್‌ ವಿಜ್ಞಾನಿಗಳ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST
ನೀರಿನಡಿ 8ನೇ ಖಂಡ; ಜೀಲ್ಯಾಂಡಿಯಾ
ನೀರಿನಡಿ 8ನೇ ಖಂಡ; ಜೀಲ್ಯಾಂಡಿಯಾ   

ಮೆಲ್ಬರ್ನ್: ನ್ಯೂಜಿಲೆಂಡ್ ದೇಶವನ್ನು ಹೊತ್ತಿರುವ ಭೂಫಲಕವು ಪ್ರತ್ಯೇಕ ಭೂಖಂಡದ ಸ್ಥಾನ ಪಡೆಯಲು ಅರ್ಹವಾಗಿದೆ ಎಂದು ವಿಜ್ಞಾನಿಗಳ ತಂಡವೊಂದು ಪ್ರತಿಪಾದಿಸಿದೆ. ಈ ಭೂಫಲಕವನ್ನು ವಿಜ್ಞಾನಿಗಳ ತಂಡ ‘ಜೀಲ್ಯಾಂಡಿಯಾ’ (Zealandia) ಎಂದು ಕರೆದಿದೆ.

ಆಸ್ಟ್ರೇಲಿಯಾದ ಸಿಡ್ನಿ ವಿಶ್ವವಿದ್ಯಾಲಯ ಮತ್ತು ನ್ಯೂಜಿಲೆಂಡ್‌ನ ವಿಕ್ಟೋರಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಜಂಟಿಯಾಗಿ ಈ ಬಗ್ಗೆ ಅಧ್ಯಯನ ನಡೆಸಿ, ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ. ‘ಈ ಭೂಫಲಕವು ತನ್ನ ಸುತ್ತಲಿನ ಸಾಗರದ ಅಡಿಯ ನೆಲದಿಂದ ತೀರಾ ಉಬ್ಬಿಕೊಂಡಿದೆ. ಜತೆಗೆ ಇದರ ಬಹುಭಾಗ ಮರಳುಗಲ್ಲಿನಿಂದ ಕೂಡಿದೆ.

ಇದರ ವಿಸ್ತೀರ್ಣ ಸರಿಸುಮಾರು ಭಾರತ ಉಪಖಂಡದಷ್ಟು ಇದೆ. ಜತೆಗೆ, ಆಸ್ಟ್ರೇಲಿಯ ಖಂಡದ ಭೂಫಲಕದಿಂದ ಪ್ರತ್ಯೇಕವಾಗಿದೆ. ಆಸ್ಟ್ರೇಲಿಯ ಖಂಡದ ಫಲಕದ ರಾಸಾಯನಿಕ ಸಂಯೋಜನೆಗೂ, ಜೀಲ್ಯಾಂಡಿಯಾ ಭೂಫಲಕದ ರಾಸಾಯನಿಕ ಸಂಯೋಜನೆಗೂ ಭಾರಿ ವ್ಯತ್ಯಾಸವಿದೆ. ಸಮೀಪದ ಖಂಡದಿಂದ ಪ್ರತ್ಯೇಕವಾಗಿರುವುದು ಮತ್ತು ಅಗಾಧವಾದ ವಿಸ್ತೀರ್ಣವನ್ನು ಆಧಾರವಾಗಿಟ್ಟುಕೊಂಡು  ಇದನ್ನು ಒಂದು ಖಂಡ ಎಂದು ಪರಿಗಣಿಸಬಹುದು’ ಎಂದು ವಿಜ್ಞಾನಿಗಳ ತಂಡ ಪ್ರತಿಪಾದಿಸಿದೆ.

‘ಈವರೆಗೆ ಈ ಭೂಫಲಕವನ್ನು ದೊಡ್ಡ ಖಂಡವೊಂದರಿಂದ ಪ್ರತ್ಯೇಕಗೊಂಡ ತುಣುಕು ಎಂದು ಪರಿಗಣಿಸಲಾಗಿತ್ತು. ಆದರೆ ಜೀಲ್ಯಾಂಡಿಯಾ ನಿಜಕ್ಕೂ ದೊಡ್ಡ ಖಂಡದ ತುಣುಕು ಅಲ್ಲ. ಈ ಹಿಂದೆ ಎಲ್ಲಾ ಭೂಖಂಡಗಳು ಒಟ್ಟಾಗಿದ್ದ ಮಹಾಭೂಖಂಡ ಗೊಂಡ್ವಾನಾದ ಒಟ್ಟು ವಿಸ್ತೀರ್ಣದಲ್ಲಿ ಶೇ 5ರಷ್ಟನ್ನು ಜೀಲ್ಯಾಂಡಿಯಾ ಹಂಚಿಕೊಂಡಿತ್ತು. ಗೊಂಡ್ವಾನಾದಿಂದ 10 ಕೋಟಿ ವರ್ಷಗಳ ಹಿಂದೆಯೇ ಜೀಲ್ಯಾಂಡಿಯಾ ಪ್ರತ್ಯೇಕಗೊಂಡಿದೆ ಎಂಬುದನ್ನು ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿದೆ’  ಎಂದು ವಿಜ್ಞಾನಿಗಳು ಹೇಳಿದ್ದಾರೆ.

‘ನ್ಯೂಜಿಲೆಂಡ್‌ ದೇಶ, ಸುತ್ತಮುತ್ತಲಿನ ದ್ವೀಪಗಳನ್ನು ಹೊರತುಪಡಿಸಿ, ಈ ಭೂಫಲಕದ ಶೇ 94ರಷ್ಟು ಭಾಗ ಸಮುದ್ರದ ನೀರಿನಲ್ಲಿ ಮುಳುಗಿದೆ. ಆದರೆ ಸಮುದ್ರಮಟ್ಟದಿಂದ ತೀರಾ ಕೆಳಮಟ್ಟದಲ್ಲಿ ಇಲ್ಲ. ಉಪಗ್ರಹ ಚಿತ್ರ ಮತ್ತು ಇನ್ಫ್ರಾರೆಡ್‌್ ಚಿತ್ರಗಳಲ್ಲಿ ಈ ವಿವರಗಳೆಲ್ಲಾ ಸ್ಪಷ್ಟವಾಗಿ ಕಾಣುತ್ತವೆ’ ಎಂದು ತಂಡ ವಿವರಿಸಿದೆ.

22 ವರ್ಷಗಳ ಸಂಶೋಧನೆ
‘1995ರಲ್ಲೇ ಈ ಬಗ್ಗೆ ನ್ಯೂಜಿಲೆಂಡ್‌ನ ವಿಜ್ಞಾನಿಗಳ ತಂಡವೊಂದು ಸಂಶೋಧನೆ ಆರಂಭಿಸಿತ್ತು. ಆಗಲೇ ಈ ಭೂಫಲಕಕ್ಕೆ ಜೀಲ್ಯಾಂಡಿಯಾ ಎಂದು ಹೆಸರು ಇಟ್ಟದ್ದು. ಆದರೆ 2007ರ ಹೊತ್ತಿಗೆ ಆ ತಂಡದ ಸಂಶೋಧನೆ ಸ್ಥಗಿತಗೊಂಡಿತ್ತು. ಅದೇ ಸಮಯಕ್ಕೆ ನಾವು ಸಂಶೋಧನೆ ಆರಂಭಿಸಿದ್ದೆವು. ಸಾಗರದಾಳದಲ್ಲಿ ಸಮೀಕ್ಷೆ, ಮಾದರಿ ಸಂಗ್ರಹ ಮತ್ತು ವಿಶ್ಲೇಷಣೆಗೆ ಹತ್ತು ವರ್ಷ ಬೇಕಾಯಿತು’ ಎಂದು  ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್‌ನ ವಿಜ್ಞಾನಿಗಳ ತಂಡ ಹೇಳಿಕೊಂಡಿದೆ.

ಘೋಷಿಸುವವರು ಯಾರು?
ಹೊಸ ಭೂಖಂಡವನ್ನು ಘೋಷಿಸಲು ಯಾವುದೇ ಪ್ರಾಧಿಕಾರ ಅಥವಾ ಸಂಸ್ಥೆ ಅಸ್ತಿತ್ವದಲ್ಲಿಲ್ಲ. ಹೀಗಾಗಿ ನಮ್ಮ ಸಂಶೋಧನೆಯನ್ನು ಪರಿಶೀಲಿಸಿ, ನಮ್ಮ ಪ್ರತಿಪಾದನೆಯನ್ನು ಒಪ್ಪಿಕೊಂಡು, ಜೀಲ್ಯಾಂಡಿಯಾವನ್ನು ಭೂಮಿಯ ಎಂಟನೇ ಖಂಡ ಎಂದು ಘೋಷಿಸುವವರು ಯಾರು ಎಂಬ ತಾಂತ್ರಿಕ ಸಮಸ್ಯೆ ಎದುರಾಗಿದೆ ಎಂದು ವಿಜ್ಞಾನಿಗಳ ತಂಡ ಅಲವತ್ತುಕೊಂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.