ADVERTISEMENT

ನೇಪಾಳ: ಶಾಲೆಗಳು ಪುನರಾರಂಭ

​ಪ್ರಜಾವಾಣಿ ವಾರ್ತೆ
Published 31 ಮೇ 2015, 19:30 IST
Last Updated 31 ಮೇ 2015, 19:30 IST

ಕಠ್ಮಂಡು (ಪಿಟಿಐ): ಭೂಕಂಪದ ಆಘಾತದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ನೇಪಾಳದಲ್ಲಿ ಭಾನುವಾರ (ಇಲ್ಲಿ ವಾರದ ರಜೆ ಶನಿವಾರ) ಶಾಲೆಗಳು ಪುನರಾರಂಭಗೊಂಡಿವೆ.

ಹಿಮಾಲಯದ ತಪ್ಪಲಿನಲ್ಲಿ ಇರುವ  ನೇಪಾಳದಲ್ಲಿ ಏಪ್ರಿಲ್‌ 25 ರಂದು ಸಂಭವಿಸಿದ್ದ ಭೂಕಂಪದಲ್ಲಿ 8 ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದರು. ಭೂಕಂಪ ಸಂಭವಿಸಿದ ಸುಮಾರು 1 ತಿಂಗಳ ಬಳಿಕ ಶಾಲೆಗಳು ಶುರುವಾಗಿವೆ.

ಭೂಕಂಪದಿಂದಾಗಿ ಹೆಚ್ಚಿನ ಶಾಲೆಗಳು ನೆಲಸಮಗೊಂಡಿವೆ. ಆದ್ದರಿಂದ ತಾತ್ಕಾಲಿಕವಾಗಿ ಟೆಂಟ್‌ಗಳನ್ನು ನಿರ್ಮಿಸಿ ತರಗತಿಗಳನ್ನು ನಡೆಸಲು ವ್ಯವಸ್ಥೆ ಮಾಡಲಾಗಿದೆ.

ಮೊದಲ ದಿನ ಪಾಠಗಳು ನಡೆಯಲಿಲ್ಲ. ಶಿಕ್ಷಕರು ಪಠ್ಯೇತರ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಲು ಪ್ರಯತ್ನಿಸಿದರು.

ಗೋರ್ಖಾ, ಸಿಂಧೂಪಾಲ್‌ಚೌಕ್‌ ಮತ್ತು ನುವಾಕೋಟ್‌ ಜಿಲ್ಲೆಗಳಲ್ಲಿ ಶೇ 90 ಕ್ಕೂ ಅಧಿಕ ಶಾಲಾ– ಕಾಲೇಜುಗಳು ನೆಲಸಮಗೊಂಡಿವೆ. ಹಲವರು ತಮ್ಮ ಸಹಪಾಠಿಗಳು, ಶಿಕ್ಷಕರನ್ನು ಕಳೆದುಕೊಂಡಿದ್ದಾರೆ.

ಮೇ 17 ರಂದು ಶಾಲೆಗಳನ್ನು ತೆರೆಯಲು ಈ ಮೊದಲು ನಿರ್ಧರಿಸಲಾಗಿತ್ತು. ಆದರೆ ಮೇ 12 ರಂದು ರಿಕ್ಟರ್‌ ಮಾಪಕದಲ್ಲಿ 7.4 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದ್ದರಿಂದ ಶಾಲೆಗಳ ಪುನರಾರಂಭ ಮತ್ತಷ್ಟು ತಡವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.