ADVERTISEMENT

ನೇಪಾಳ: 5,400 ಭಾರತೀಯರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2015, 9:18 IST
Last Updated 28 ಏಪ್ರಿಲ್ 2015, 9:18 IST

ಕಠ್ಮಂಡು (ಐಎಎನ್ಎಸ್‌): ನೇಪಾಳದಲ್ಲಿ ಭೂಕಂಪದಿಂದ ನೆಲೆ ಕಳೆದುಕೊಂಡು ತೊಂದರೆಗೆ ಸಿಲುಕಿದ್ದ 5,400 ಭಾರತೀಯರನ್ನು ವಾಯುಪಡೆ ರಕ್ಷಿಸಿ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತಂದಿದೆ.

ವಾಯುಪಡೆ ಮತ್ತು ಇತರೆ ಖಾಸಗಿ ವಿಮಾನಗಳ ಮೂಲಕ ಮಂಗಳವಾರ ಬೆಳಿಗ್ಗೆವರೆಗೆ ಒಟ್ಟು 5,400 ಮಂದಿಯನ್ನು  ಭಾರತಕ್ಕೆ ಕರೆತರಲಾಗಿದೆ. ಗಾಯಾಳುಗಳು, ವೃದ್ಧರು, ಮಹಿಳೆಯರು ಮತ್ತು ಮಕ್ಕಳನ್ನು ಕರೆತರಲು ಆದ್ಯತೆ ನೀಡಲಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಎಸ್‌. ಜಯಶಂಕರ್‌ ಹೇಳಿದ್ದಾರೆ.

ನೇಪಾಳದಲ್ಲಿ ತೊಂದರೆಗೆ ಸಿಲುಕಿಕೊಂಡಿರುವ ಭಾರತೀಯರು ಆತಂಕ ಪಡುವ ಅಗತ್ಯವಿಲ್ಲ, ಎಲ್ಲರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ. ನಮ್ಮ ರಕ್ಷಣೆಗೆ ಯಾರೂ ಬರುವುದಿಲ್ಲ ಎಂದು ಜನರು ಭಯಪಡಬೇಕಿಲ್ಲ ಎಂದು ಅವರು ಹೇಳಿದರು. 

ಭಾರತದಿಂದ ಹೋಗಿರುವ ತಜ್ಞರ ತಂಡವೊಂದು ನೇಪಾಳದಲ್ಲಿ ವಿದ್ಯುತ್‌ ಪೂರೈಕೆ ಜಾಲ ಮತ್ತು ರಸ್ತೆ ಸಾರಿಗೆ ವ್ಯವಸ್ಥೆ ಸರಿಪಡಿಸಲು ಪ್ರಯತ್ನಿಸುತ್ತಿದೆ. ಇಂಡಿಯನ್‌ ಆಯಿಲ್‌ ಕಾರ್ಪೊರೆಷನ್‌ನ ಇನ್ನೊಂದು ತಂಡವೂ ರಕ್ಷಣಾ ಕಾರ್ಯಾಚರಣೆಯಲ್ಲಿ ಕೈಜೋಡಿಸಿದೆ. ಬುಧವಾರದ ವೇಳೆಗೆ ರಸ್ತೆ ಸಾರಿಗೆ ವ್ಯವಸ್ಥೆ ಸ್ವಲ್ಪ ಸುಧಾರಿಸಿದರೆ, ರಕ್ಷಣಾ ಕಾರ್ಯಾಚರಣೆಗೆ ಇನ್ನಷ್ಟು ವೇಗ ಲಭಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಭಾರತವು ಇದುವರೆಗೆ ನೇಪಾಳಕ್ಕೆ 22 ಟನ್‌ಗಳಷ್ಟು ಧಾನ್ಯಗಳು ಮತ್ತು ಆಹಾರದ ಪೊಟ್ಟಣಗಳನ್ನು ಕಳುಹಿಸಿಕೊಟ್ಟಿದೆ. ಶುದ್ಧ ಕುಡಿಯುವ ನೀರು, ಔಷಧ, ಪ್ಲಾಸ್ಟಿಕ್‌ ಟೆಂಟ್‌ಗಳು ಮತ್ತು 1,400 ಹೊದಿಕೆಗಳನ್ನೂ ಪೂರೈಸಿದೆ ಎಂದು ಜೈ ಶಂಕರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.