ADVERTISEMENT

ನ್ಯೂ ಹ್ಯಾಂಪ್‌ಷೈರ್‌ನಲ್ಲಿ ಹಿಲರಿಗೆ ಸೋಲು

ಅಮೆರಿಕ ಅಧ್ಯಕ್ಷೀಯ ಚುನಾವಣೆ; ಡೊನಾಲ್ಡ್‌ ಟ್ರಂಪ್‌ಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2016, 6:44 IST
Last Updated 10 ಫೆಬ್ರುವರಿ 2016, 6:44 IST
ನ್ಯೂ ಹ್ಯಾಂಪ್‌ಷೈರ್‌ನಲ್ಲಿ ಹಿಲರಿಗೆ ಸೋಲು
ನ್ಯೂ ಹ್ಯಾಂಪ್‌ಷೈರ್‌ನಲ್ಲಿ ಹಿಲರಿಗೆ ಸೋಲು   

ವಾಷಿಂಗ್ಟನ್‌ (ಪಿಟಿಐ): ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿಗಳ  ಆಯ್ಕೆಯ ಪ್ರಾಥಮಿಕ ಸುತ್ತಿನ ನ್ಯೂ ಹ್ಯಾಂಪ್‌ಷೈರ್‌ ಫಲಿತಾಂಶ ಬುಧವಾರ  ಪ್ರಕಟಗೊಂಡಿದ್ದು, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್‌, ಬೆರ್ನಿ ಸ್ಯಾಂಡರ್ಸ್‌  ವಿರುದ್ಧ ಭಾರಿ ಅಂತರದ ಸೋಲಿನ ಆಘಾತ ಅನುಭವಿಸಿದ್ದಾರೆ.

ಅಯೊವಾ ಕಾಕಸಸ್‌ನಲ್ಲಿ ಪ್ರಯಾಸಕರ ಗೆಲುವು ಕಂಡಿದ್ದ ಹಿಲರಿ ಕ್ಲಿಂಟನ್‌ ನ್ಯೂ ಹ್ಯಾಂಪ್‌ಷೈರ್‌ನಲ್ಲಿ ಮುಖಭಂಗ ಅನುಭವಿಸಿದ್ದಾರೆ. ಬೆರ್ನಿ ಸ್ಯಾಂಡರ್ಸ್‌ ಅವರಿಗೆ ಶೇ 59ರಷ್ಟು  ಮತಗಳು ಲಭಿಸಿದರೆ ಹಿಲರಿ ಕ್ಲಿಂಟನ್‌ಗೆ ಶೇ 38ರಷ್ಟು ಮತಗಳು ಬಿದ್ದಿವೆ.

ಮೊದಲ ಸುತ್ತಿನಲ್ಲಿ ಸೋಲು ಕಂಡಿದ್ದ ರಿಪಬ್ಲಿಕನ್‌ ಪಕ್ಷದ ವಿವಾದಿತ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌, ಹ್ಯಾಂಪ್‌ಷೈರ್‌ನಲ್ಲಿ ಜಾನ್‌ ರಿಚರ್ಡ್‌ ಕೈಸ್‌ ವಿರುದ್ಧ ಗೆಲುವು ಕಂಡಿದ್ದಾರೆ. ಎದುರಾಳಿಗಿಂತ ಅವರು 18 ಸಾವಿರ ಮತಗಳನ್ನು ಹೆಚ್ಚಿಗೆ ಪಡೆದಿದ್ದಾರೆ.

ಟೆಕ್ಸಾಸ್‌ನ ಸಂಸದ ಟೆಡ್‌ ಕ್ರೂಜ್‌, ಮಾಜಿ ಫ್ಲೊರಿಡಾ ಗವರ್ನರ್‌ ಜೆಬ್‌ ಬುಷ್‌, ಸಂಸದ ಮಾರ್ಕೊ ರುಬಿಯೊ ಮೂರನೆಯ ಸುತ್ತಿನಲ್ಲಿ ಕಣದಲ್ಲಿದ್ದು, ಫಲಿತಾಂಶ ಎದುರು ನೋಡುತ್ತಿದ್ದಾರೆ.

‘ನ್ಯೂ ಹ್ಯಾಂಪ್‌ಷೈರ್‌ನಲ್ಲಿ ಗೆಲುವು ಲಭಿಸಿದೆ. ಇದರ ಜತೆಗೆ ಸೌತ್ ಕೆರೊಲಿನಾದ ಪ್ರಾಥಮಿಕ ಚುನಾವಣೆಯಲ್ಲೂ  ಗೆದ್ದು ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಳ್ಳುತ್ತೇನೆ’ ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.