ADVERTISEMENT

ಪತ್ರಕರ್ತರಿಗೆ ದೇಶ ತೊರೆಯಲು ಸೂಚನೆ: ಭಾರತ ವಿರುದ್ಧ ಚೀನಾ ಮಾಧ್ಯಮ ಕಿಡಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2016, 7:34 IST
Last Updated 25 ಜುಲೈ 2016, 7:34 IST
ಪತ್ರಕರ್ತರಿಗೆ ದೇಶ ತೊರೆಯಲು ಸೂಚನೆ: ಭಾರತ ವಿರುದ್ಧ ಚೀನಾ ಮಾಧ್ಯಮ ಕಿಡಿ
ಪತ್ರಕರ್ತರಿಗೆ ದೇಶ ತೊರೆಯಲು ಸೂಚನೆ: ಭಾರತ ವಿರುದ್ಧ ಚೀನಾ ಮಾಧ್ಯಮ ಕಿಡಿ   

ಬೀಜಿಂಗ್ (ಪಿಟಿಐ): ಚೀನಾದ ಅಧಿಕೃತ ಸುದ್ದಿ ಸಂಸ್ಥೆಗಾಗಿ ಕಾರ್ಯವೆಸಗುತ್ತಿದ್ದ ಮೂರು ಪತ್ರಕರ್ತರನ್ನು ದೇಶ ತೊರೆಯುವಂತೆ ಹೇಳಿದ ಭಾರತದ ನಿರ್ಧಾರದ ವಿರುದ್ಧ ಚೀನಾದ ಸುದ್ದಿ ಪತ್ರಿಕೆ ಕಿಡಿ ಕಾರಿದೆ.

ಭಾರತದ ಎನ್ಎಸ್ ಜಿ ಪ್ರವೇಶವನನ್ನು ಬೆಂಬಲಿಸದೇ ಇರುವುದಕ್ಕಾಗಿ ಭಾರತ ಈ ರೀತಿಯ ನಿರ್ಧಾರವನ್ನು ಕೈಗೊಂಡಿದೆಯೇ? ಎಂದು ಚೀನಾದ ಅಂತಾರಾಷ್ಟ್ರೀಯ ವ್ಯವಹಾರಗಳಿಗೆ ಸಂಬಂಧಿಸಿದ ಸರ್ಕಾರಿ ಸ್ವಾಮ್ಯದ ಪತ್ರಿಕೆ ಗ್ಲೋಬಲ್ ಟೈಮ್ಸ್  ಪ್ರಶ್ನಿಸಿದೆ. ಒಂದು ವೇಳೆ ಹಾಗಾಗಿದ್ದಲ್ಲಿ, ಇದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಪತ್ರಿಕೆಯ ಸಂಪಾದಕೀಯದಲ್ಲಿ ಎಚ್ಚರಿಕೆಯನ್ನು ನೀಡಲಾಗಿದೆ.

ಚೀನಾದ ಅಧಿಕೃತ ಸುದ್ದಿ ಸಂಸ್ಥೆಯಾದ ಕ್ಸಿನ್‍ಹುವಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೂವರು ಪತ್ರಕರ್ತರು ಜುಲೈ 31ರಂದು ಭಾರತವನ್ನು ತೊರೆಯಬೇಕೆಂದು ಭಾರತ ಸರಕಾರ ಆದೇಶಿಸಿತ್ತು. ಆದರೆ ಇವರ ವೀಸಾ ನವೀಕರಿಸದೇ ಇರುವುದಕ್ಕೆ ಕಾರಣ ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ. ಪತ್ರಕರ್ತರಾಗಿ ಕಾರ್ಯ ನಿರ್ವಹಿಸುವುದರ ಜತೆಗೇ ಇವರು ದೇಶ ವಿರೋಧಿ ಕಾರ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಗುಪ್ತಚರ ಸಂಸ್ಥೆ ಕಳವಳ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ಈ  ಪತ್ರಕರ್ತರಿಗೆ ದೇಶ ತೊರೆಯಲು ಭಾರತ ಸರ್ಕಾರ ಹೇಳಿರುವುದಾಗಿ ಬಲ್ಲಮೂಲಗಳು ವರದಿ ಮಾಡಿವೆ.

ಕ್ಸಿನ್‍ಹುವಾದ ದೆಹಲಿ ಬ್ಯೂರೋ ಮುಖ್ಯಸ್ಥ ವು ಕಿಯಾಗ್ ಹಾಗೂ ಮುಂಬೈನಲ್ಲಿರುವ ಲು ತಂಗ್ ಮತ್ತು ಶಿಯಾಂಗ್‍ಗಾಂಗ್‍ ಅವರಿಗೆ ಜು.31ರೊಳಗೆ ಭಾರತ ತೊರೆಯುವಂತೆ ಸರಕಾರ ಆದೇಶಿಸಿತ್ತು. ಚೀನಾ ಪತ್ರಕರ್ತರನ್ನು ಈ ರೀತಿ ದೇಶದಿಂದ  ಹೊರಹೋಗಲು ಭಾರತ ಸೂಚಿಸಿರುವುದು ಇದೇ ಮೊದಲು.

ಎನ್ಎಸ್‍ಜಿ ಗೆ ಸೇರಲು ಅಣ್ವಸ್ತ್ರ ಪ್ರಸರಣ ತಡೆ (ಎನ್‍ಪಿಟಿ) ಒಪ್ಪಂದಕ್ಕೆ ಸಹಿ ಹಾಕಬೇಕು. ಆದರೆ ಇದಕ್ಕೆ ಸಹಿ ಹಾಕದೇ ಇರುವ ಭಾರತಕ್ಕೆ ಸದಸ್ಯತ್ವ ಕೊಡಬಾರದು ಎಂದು ಚೀನಾ ವಾದಿಸಿತ್ತು, ಈ ಭಿನ್ನಾಭಿಪ್ರಾಯಗಳ ನಡುವೆಯೇ ಪತ್ರಕರ್ತರ ವಿರುದ್ಧ ಭಾರತ ಈ ರೀತಿಯ ಕ್ರಮ ಕೈಗೊಂಡಿದೆ.

ಆದಾಗ್ಯೂ, ವೀಸಾ ಅವಧಿ ವಿಸ್ತರಣೆಗೆ ಸಂಬಂಧಿಸಿದಂತೆ ನಮಗೆ ಸ್ಪಷ್ಟವಾದ ಉತ್ತರ ನೀಡಿ ಎಂದು ಚೀನಾದ ಪತ್ರಿಕೆ ತಮ್ಮ ಸಂಪಾದಕೀಯದಲ್ಲಿ ಒತ್ತಾಯಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.