ADVERTISEMENT

ಪಾಕಿಸ್ತಾನದಲ್ಲಿ ಚರ್ಚ್‌ ಮೇಲೆ ಉಗ್ರರ ದಾಳಿ: 8 ಜನರ ಹತ್ಯೆ, 44 ಜನರಿಗೆ ಗಾಯ

ಪಿಟಿಐ
Published 17 ಡಿಸೆಂಬರ್ 2017, 12:04 IST
Last Updated 17 ಡಿಸೆಂಬರ್ 2017, 12:04 IST
ಚಿತ್ರ: ರಾಯಿಟರ್ಸ್‌
ಚಿತ್ರ: ರಾಯಿಟರ್ಸ್‌   

ಕರಾಚಿ/ಇಸ್ಲಾಮಾಬಾದ್‌: ನೈರುತ್ಯ ಪಾಕಿಸ್ತಾನದ ಕ್ವೆಟ್ಟಾ ನಗರದ ಚರ್ಚ್‌ ಮೇಲೆ ಶಸ್ತ್ರಧಾರಿ ಭಯೋತ್ಪಾದಕರು ಭಾನುವಾರ ನಡೆಸಿದ ದಾಳಿಯಲ್ಲಿ 8 ಜನ ಮೃತಪಟ್ಟು, 44ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿದ್ದಾರೆ.

ಕ್ರಿಸ್‌ಮಸ್‌ ಹಬ್ಬ ಒಂದುವಾರ ಬಾಕಿ ಇರುವಾಗಲೇ ಬಲೂಚಿಸ್ತಾನ ಪ್ರಾಂತ್ಯದ ಬೆಥೆಲ್‌ ಸ್ಮಾರಕ ಚರ್ಚ್‌ ಮೇಲೆ ಈ ದಾಳಿ ನಡೆದಿದೆ.

‘ಈ ಕೃತ್ಯದಲ್ಲಿ ಇಬ್ಬರು ಆತ್ಮಾಹುತಿ ಬಾಂಬರ್‌ಗಳು ಭಾಗಿಯಾಗಿದ್ದರು. ಒಬ್ಬ ಉಗ್ರನನ್ನು ಚರ್ಚ್‌ ಪ್ರವೇಶಕ್ಕೂ ಮುನ್ನವೇ ಪೊಲೀಸರು ಕೊಂದಿದ್ದಾರೆ. ಮತ್ತೊಬ್ಬ ಉಗ್ರ ಚರ್ಚ್‌ ಹೊಕ್ಕು ಸ್ಫೋಟಿಸಿಕೊಂಡಿದ್ದರಿಂದ ದುರ್ಘಟನೆ ನಡೆದಿದೆ’ ಎಂದು ಬಲೂಚಿಸ್ತಾನ ಪ್ರಾಂತ್ಯದ ಗೃಹಸಚಿವ ಮಿರ್‌ ಸರ್ಫರಾಜ್‌ ಬಗ್ತಿ ತಿಳಿಸಿದ್ದಾರೆ.

ADVERTISEMENT

‘ಚರ್ಚ್‌ನಲ್ಲಿದ್ದವರನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲು ಉಗ್ರರು ಬಯಸಿದ್ದರು. ಭದ್ರತಾ ಪಡೆಗಳು ಅವರ ಯೋಜನೆಯನ್ನು ವಿಫಲಗೊಳಿಸಿವೆ’ ಎಂದರು.

‘ದಾಳಿ ನಡೆದ ವೇಳೆ ಸುಮಾರು 400 ಜನರು ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು’ ಎಂದು ಬಲೂಚಿಸ್ತಾನದ ಇನ್‌ಸ್ಪೆಕ್ಟರ್‌ ಜನರಲ್‌ ಮೌಜಮ್ ಅನ್ಸಾರಿ ತಿಳಿಸಿದರು.

‘ದಾಳಿಯಲ್ಲಿ 8 ಜನ ಮೃತಪಟ್ಟಿದ್ದಾರೆ. ಗಾಯಗೊಂಡಿರುವ 44 ಜನರಲ್ಲಿ 9 ಜನರ ಸ್ಥಿತಿ ಚಿಂತಾಜನಕವಾಗಿದೆ’ ಎಂದು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಸಾರ್ವಜನಿಕ ಆಸ್ಪತ್ರೆಯ ಡಾ.ವಾಸಿಂ ಬೇಗ್‌ ಹೇಳಿದರು.

ಪೇಶಾವರದ ಶಾಲೆಯ ಮೇಲೆ 2014ರಲ್ಲಿ ನಡೆದ ಉಗ್ರರ ದಾಳಿಗೆ ಮೂರು ವರ್ಷ ತುಂಬಿದ ಮರುದಿನವೇ ನಡೆದ ಈ ದಾಳಿಯನ್ನು ಪಾಕಿಸ್ತಾನ ಸರ್ಕಾರ ಖಂಡಿಸಿದೆ. ಪೇಶಾವರ ದಾಳಿಯಲ್ಲಿ 150 ಜನರು ಮೃತಪಟ್ಟಿದ್ದರು. ಅವರಲ್ಲಿ ಮಕ್ಕಳ ಸಂಖ್ಯೆಯೆ ಹೆಚ್ಚಿತ್ತು.

ಈ ದಾಳಿಯ ಹೊಣೆಯನ್ನು ಈವೆರೆಗೂ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.

ದಾಳಿಯನ್ನು ಖಂಡಿಸಿ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ತೆಹರಿಕ್‌–ಇ–ಇನ್ಸಾಫ್‌ ಪಕ್ಷದ ಅಧ್ಯಕ್ಷ ಇಮ್ರಾನ್‌ ಖಾನ್‌ ‘ಕ್ರಿಸ್‌ಮಸ್‌ ಸಮಯದಲ್ಲಿ ಚರ್ಚ್‌ಗಳಿಗೆ ಹೆಚ್ಚಿನ ಭದ್ರತೆ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.