ADVERTISEMENT

ಪಾಕ್‌ಗೆ ಮುಖಭಂಗ

ಭಾರತದ ವಿರುದ್ಧ ಸುಳ್ಳು ಆರೋಪ

ಪಿಟಿಐ
Published 24 ಸೆಪ್ಟೆಂಬರ್ 2017, 19:30 IST
Last Updated 24 ಸೆಪ್ಟೆಂಬರ್ 2017, 19:30 IST
ವಿಶ್ವಸಂಸ್ಥೆಯಲ್ಲಿ ಗಾಜಾದ ಬಾಲಕಿ ಚಿತ್ರ ಪ್ರದರ್ಶಿಸಿದ ಮಲೀಹಾ
ವಿಶ್ವಸಂಸ್ಥೆಯಲ್ಲಿ ಗಾಜಾದ ಬಾಲಕಿ ಚಿತ್ರ ಪ್ರದರ್ಶಿಸಿದ ಮಲೀಹಾ   

ವಿಶ್ವಸಂಸ್ಥೆ: ವಿಶ್ವದ ಮುಂದೆ ಭಾರತವನ್ನು ಕೆಟ್ಟದಾಗಿ ಚಿತ್ರಿಸುವ ಭರದಲ್ಲಿ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವೇ ಮುಖಭಂಗಕ್ಕೆ ಒಳಗಾಗಿದೆ.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರ ಭಾಷಣಕ್ಕೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ, ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಕಾಯಂ ಪ್ರತಿನಿಧಿಯಾಗಿರುವ ಮಲೀಹಾ ಲೋಧಿ ಅವರು  ಕಾಶ್ಮೀರದಲ್ಲಿ ಪೆಲೆಟ್‌ ಬಂದೂಕು ದಾಳಿಯ ಸಂತ್ರಸ್ತೆ ಎಂದು ಗಾಜಾದ (ಪ್ಯಾಲೆಸ್ಟೀನ್‌) ಬಾಲಕಿಯ ಚಿತ್ರ ತೋರಿಸಿ ನಗೆಪಾಟಲಿಗೆ ಈಡಾಗಿದ್ದಾರೆ. 

ಸುಷ್ಮಾ ಸ್ವರಾಜ್‌ ಅವರು ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಶನಿವಾರ ಮಾತನಾಡಿ, ಪಾಕಿಸ್ತಾನವು ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವುದನ್ನು ಬಲವಾಗಿ ಖಂಡಿಸಿದ್ದರು.

ADVERTISEMENT

ಇದಕ್ಕೆ ಪ್ರತಿಕ್ರಿಯೆ ನೀಡುವ ತಮ್ಮ ಹಕ್ಕನ್ನು ಬಳಸಿಕೊಂಡು ಮಾತನಾಡಿದ ಮಲೀಹಾ ಅವರು, ಪೆಲೆಟ್‌ ಬಂದೂಕಿನ ಗುಂಡುಗಳಿಂದ ಮುಖದ ತುಂಬ ಗಾಯಗಳಾಗಿದ್ದ ಬಾಲಕಿಯ ಚಿತ್ರವನ್ನು ತೋರಿಸಿದರು. ‘ಇದು ಭಾರತದ ಪ್ರಜಾತಂತ್ರದ ಮುಖ’ ಎಂದು ಹಂಗಿಸಿದರು.

ಆದರೆ ಮಲೀಹಾ ಅವರು ತೋರಿಸಿದ ಚಿತ್ರ ಗಾಜಾದ 17 ವರ್ಷದ ಬಾಲಕಿ ರವ್ಯಾ ಅಬು ಜೋಮಾ ಅವರದ್ದು. ಇಸ್ರೇಲ್‌ ದಾಳಿಗೆ ಸಿಕ್ಕಿ ಅವರ ಮುಖ ಜರ್ಜರಿತವಾಗಿತ್ತು. 2014ರ ಜುಲೈನಲ್ಲಿ ಈ ಚಿತ್ರವನ್ನು ಪ್ರಶಸ್ತಿ ಪುರಸ್ಕೃತ ಛಾಯಾಗ್ರಾಹಕ, ಅಮೆರಿಕದ ಹೈಡಿ ಲಿವೈನ್‌ ತೆಗೆದಿದ್ದರು. ಹಲವು ವೆಬ್‌ಸೈಟ್‌ಗಳಲ್ಲಿ ಈ ಚಿತ್ರ ಲಭ್ಯವಿದೆ.

ಭಾರತವು ನೆರೆ ರಾಷ್ಟ್ರಗಳಿಗೆ ಹಿಂಸೆ ನೀಡುವ ದೇಶ ಎಂದು ಮಲೀಹಾ ಆರೋಪಿಸಿದರು. ಭಾರತ ಮತ್ತು ಪಾಕಿಸ್ತಾನದ ನಡುವಣ ಸಂಘರ್ಷ ಅಪಾ
ಯದ ಮಟ್ಟಕ್ಕೆ ಏರುವುದನ್ನು ತಪ್ಪಿಸುವುದಕ್ಕೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಮನಸಿದ್ದರೆ ಭಾರತದ ಆಕ್ರಮಣಕಾರಿ ಮತ್ತು ಪ್ರಚೋದನಾಕಾರಿ ನಡೆಯನ್ನು ತಡೆಯಬೇಕು ಎಂದು ಕೋರಿದರು.

ಭಾರತವು ದಕ್ಷಿಣ ಏಷ್ಯಾದಲ್ಲಿನ ಭಯೋತ್ಪಾದನಾ ಕೃತ್ಯಗಳ ತಾಯಿ ಎಂದು ಅವರು ಆರೋಪಿಸಿದರು. ಭಾರತವು ಐಐಟಿ, ಐಐಎಂ, ಇಸ್ರೊಗಳಂತಹ ಜಾಗತಿಕ ಮಟ್ಟದ ಸಂಸ್ಥೆಗಳನ್ನು ಕಟ್ಟಿದರೆ ಪಾಕಿಸ್ತಾನವು ಉಗ್ರಗಾಮಿ ಸಂಘಟನೆಗಳನ್ನು ಹುಟ್ಟು ಹಾಕಿದೆ ಎಂದು ಸುಷ್ಮಾ ಅವರು ಹೇಳಿದ್ದರು.
*
ಅತ್ಯುತ್ಸಾಹದ ಟೀಕೆ
* ಸಾಮಾನ್ಯವಾಗಿ, ಇಂತಹ ಪ್ರತಿಕ್ರಿಯೆ ನೀಡುವುದಕ್ಕೆ ವಿದೇಶಾಂಗ ಸಚಿವಾಲಯದ ಕಿರಿಯ ಅಧಿಕಾರಿಗಳನ್ನು ಬಳಸಿಕೊಳ್ಳಲಾಗುತ್ತದೆ. ಆದರೆ ಪಾಕಿಸ್ತಾನದ ಕಾಯಂ ಪ್ರತಿನಿಧಿಯೇ ಭಾರತವನ್ನು ಟೀಕಿಸಿದರು

* ಭಾರತದ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಅವರು ಬಲೂಚಿಸ್ತಾನದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಪಾಕಿಸ್ತಾನ ಎರಡನೇ ಬಾರಿ ಆರೋಪಿಸಿದೆ

* ಜಮ್ಮು ಮತ್ತು ಕಾಶ್ಮೀರ ವಿವಾದ ಪರಿಹಾರ ಮತ್ತು ಶಾಂತಿ ಸ್ಥಾಪನೆಗೆ ಭಾರತದ ಜತೆಗೆ ಮಾತುಕತೆಗೆ ಸಿದ್ಧ ಎಂದು ಮಲೀಹಾ ಹೇಳಿದರು

* ಮಲೀಹಾ ಅವರ ಟೀಕೆಗೆ ತಕ್ಷಣ ಪ್ರತಿಕ್ರಿಯೆ ನೀಡಲು ಭಾರತ ಮುಂದಾಗಿಲ್ಲ
*
ಮಲೀಹಾ ಮೌನ
ಮಲೀಹಾ ತೋರಿಸಿದ ಚಿತ್ರ ಬ್ರಿಟನ್‌ನ ಗಾರ್ಡಿಯನ್‌ ಪತ್ರಿಕೆಯ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿತ್ತು. ‘ರವ್ಯಾ ಅಬು ಜೋಮಾ (17) ಗಾಜಾದ ಶಿಫಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರವ್ಯಾ ಕುಟುಂಬ ವಾಸಿಸುತ್ತಿದ್ದ ಫ್ಲ್ಯಾಟ್‌ ಮೇಲೆ ಇಸ್ರೇಲ್‌ ವಾಯು ದಾಳಿ ನಡೆಸಿತ್ತು. ಆಕೆಯ ಸೋದರಿ ಮತ್ತು ಮೂವರು ಸಂಬಂಧಿಕರು ದಾಳಿಯಲ್ಲಿ ಮೃತಪಟ್ಟರು’ ಎಂದು ಈ ಚಿತ್ರಕ್ಕೆ ಶೀರ್ಷಿಕೆ ಕೊಡಲಾಗಿತ್ತು.

ಮಲೀಹಾ ಸಾಮಾಜಿಕ ಜಾಲ ತಾಣದಲ್ಲಿ ಸಕ್ರಿಯರಾಗಿದ್ದಾರೆ. ಆದರೆ ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಮಾಡಿದ ಎಡವಟ್ಟು ಗೊತ್ತಾದ ಬಳಿಕ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.