ADVERTISEMENT

ಪಾಕ್‌ನಲ್ಲಿ ಮತ್ತೆ ತೆರೆಕಾಣಲಿವೆ ಹೊಸ ಬಾಲಿವುಡ್‌ ಚಿತ್ರಗಳು

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 19:30 IST
Last Updated 21 ಜನವರಿ 2017, 19:30 IST

ಕರಾಚಿ (ಪಿಟಿಐ): ಬಾಲಿವುಡ್‌ ಚಿತ್ರ ಪ್ರದರ್ಶನಕ್ಕೆ ಪಾಕಿಸ್ತಾನ ಸರ್ಕಾರ ನಿಷೇಧ ಹೇರದಿರುವುದರಿಂದ ಶೀಘ್ರದಲ್ಲೇ ದೇಶದಲ್ಲಿ ಹೊಸ ಬಾಲಿವುಡ್‌ ಚಿತ್ರಗಳ ಪ್ರದರ್ಶನ ಆರಂಭವಾಗಲಿದೆ ಎಂದು ಪಾಕಿಸ್ತಾನ ಚಲನಚಿತ್ರ  ವಿತರಕರ ಸಂಘದ ಅಧ್ಯಕ್ಷ ಜೊರೈಜ್‌ ಲಷರಿ ಹೇಳಿದ್ದಾರೆ.

‘ಎರಡು ರಾಷ್ಟ್ರಗಳ ನಡುವಿನ ಸಂಬಂಧ ಈಚೆಗೆ ಬಿಗಡಾಯಿಸಿದ್ದರಿಂದ ಇಲ್ಲಿ ಹಿಂದಿ ಚಿತ್ರ ಪ್ರದರ್ಶನ ಸ್ಥಗಿತಗೊಂಡಿತ್ತು. ಆದರೆ ಸರ್ಕಾರ ಚಿತ್ರ ಪ್ರದರ್ಶನದ ಮೇಲೆ ನಿಷೇಧ ಹೇರಿರಲಿಲ್ಲ’ ಎಂದು  ಲಷರಿಯವರು ಮಾಧ್ಯಮ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

‘ಭಾರತದಲ್ಲಿ ಬಿಡುಗಡೆಯಾದ ಹೊಸ ಸಿನಿಮಾಗಳನ್ನು ರಫ್ತು ಮಾಡಿಕೊಳ್ಳುವ, ಪ್ರಮಾಣೀಕರಿಸುವ ಮತ್ತು ಪ್ರದರ್ಶಿಸುವ ವಿಚಾರದಲ್ಲಿ ಚಿತ್ರ ವಿತರಕರು ನಿರಾಕ್ಷೇಪಣಾ ಪತ್ರ ಪಡೆಯುವಲ್ಲಿ ಸಮಸ್ಯೆ ಎದುರಿಸುತ್ತಿದ್ದರು. ಈ ಸಮಸ್ಯೆ ನಿವಾರಣೆಗೆ ಪ್ರಧಾನ ಮಂತ್ರಿ ನವಾಜ್‌ ಷರೀಫ್‌ ಅವರು ವಿಶೇಷ ಸಮಿತಿಯೊಂದನ್ನು ರಚಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ADVERTISEMENT

ಪಾಕಿಸ್ತಾನದ ಕಲಾವಿದರನ್ನು ಭಾರತ ನಿಷೇಧಿಸಿದ ನಂತರ ಇಲ್ಲಿನ ಚಿತ್ರ ವಿತರಕರು ಸ್ವಯಂಪ್ರೇರಿತರಾಗಿ ಭಾರತೀಯ ಚಲನಚಿತ್ರಗಳ ಪ್ರದರ್ಶನವನ್ನು ಸ್ಥಗಿತಗೊಳಿಸಿದ್ದರು.  ಆದರೆ ಈಗ ಎರಡು ದೇಶಗಳ ಸಿನಿಮಾ ನಿರ್ಮಾಪಕರು ಮತ್ತು ವಿತರಕರು ಪಾಕಿಸ್ತಾನದಲ್ಲಿ ಭಾರತದ ಸಿನಿಮಾಗಳನ್ನು  ಬಿಡುಗಡೆ ಮಾಡಲು ಸಿದ್ಧರಿದ್ದಾರೆ. ಎಂದಿದ್ದಾರೆ.

ಅಮೀರ್‌ ಖಾನ್‌ರ ‘ದಂಗಲ್‌’ ಮತ್ತು  ಶಾರುಖ್‌ ಖಾನ್‌ ನಟನೆಯ ಬಿಡುಗಡೆಗೆ ಸಿದ್ಧವಾಗಿರುವ ‘ರಯೀಸ್‌’ ಚಿತ್ರಗಳ ಪ್ರಿಂಟ್‌ಗಳನ್ನು ರಫ್ತು ಮಾಡಿಕೊಳ್ಳಲು ನಿರಾಕ್ಷೇಪಣಾ ಪತ್ರಕ್ಕಾಗಿ ಪಾಕಿಸ್ತಾನದ ವಿತರಕರು ಮತ್ತು ಪ್ರದರ್ಶಕರು ಕಾತುರರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.