ADVERTISEMENT

ಪಾಕ್‌ನಲ್ಲಿ 124 ವಿದ್ಯಾರ್ಥಿಗಳ ನರಮೇಧ

ತಾಲಿಬಾನ್‌ ಉಗ್ರರ ಹೀನ ಕೃತ್ಯ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2014, 11:33 IST
Last Updated 16 ಡಿಸೆಂಬರ್ 2014, 11:33 IST

ಪೇಶಾವರ (ಪಿಟಿಐ):  ಪಾಕ್‌ನಲ್ಲಿ ತಾಲಿಬಾನ್‌ ಉಗ್ರರ ರಣಕೇಕೆಗೆ 124ಕ್ಕೂ ಹೆಚ್ಚು ಮುಗ್ಧ ಶಾಲಾ ಮಕ್ಕಳು ಬಲಿಯಾಗಿದ್ದಾರೆ. ಮಂಗಳವಾರ ಬೆಳಿಗ್ಗೆ ಪೇಶಾವರದ ಸೈನಿಕ ಶಾಲೆಯೊಂದಕ್ಕೆ ನುಗ್ಗಿದ ತಾಲಿಬಾನ್ ಆತ್ಮಹತ್ಯಾ ದಾಳಿಕೋರರು 124 ವಿದ್ಯಾರ್ಥಿಗಳು ಸೇರಿ ಒಟ್ಟು 126 ಮಂದಿಯನ್ನು ದಾರುಣವಾಗಿ ಹತ್ಯೆ ಮಾಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಶಾಲಾ ವಿದ್ಯಾರ್ಥಿಗಳ ಮೇಲೆ ನಡೆದ ಅತ್ಯಂತ  ಭೀಕರ ದಾಳಿ ಇದಾಗಿದೆ. ಭಯೋತ್ಪಾದನೆಯ ಅತ್ಯಂತ  ಕ್ರೂರವಾದ ಮುಖ ಇದು ಎಂದು ಜಾಗತಿಕ ನಾಯಕರು ಈ ಘಟನೆಗೆ ಆತಂಕ ವ್ಯಕ್ತಪಡಿಸಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆಗಳಿವೆ.

ಘಟನೆ ವಿವರ: ಸೈನಿಕರಂತೆ ಸಮವಸ್ತ್ರ ಧರಿಸಿ, ಶಸ್ತ್ರಸಜ್ಜಿತರಾಗಿ ಬೆಳಿಗ್ಗೆ 10;30ರ ಸುಮಾರಿಗೆ ಇಲ್ಲಿನ ವರ್ಸಾಕ್‌ ರಸ್ತೆಯಲ್ಲಿರುವ ಸೈನಿಕ ಶಾಲೆಗೆ ನುಗ್ಗಿದ 8 ರಿಂದ 10 ಮಂದಿ ಇದ್ದ ಆತ್ಮಹತ್ಯಾ ದಾಳಿಕೋರರು, ಶಾಲಾ ಕೊಠಡಿಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದರು. ಒಂದರ ನಂತರ ಇನ್ನೊಂದು ಕೊಠಡಿ ಎನ್ನುವಂತೆ ಭಯಾನಕವಾಗಿ ಗುಂಡಿನ ಮಳೆಗೆರೆಯುತ್ತಾ ಸಾಗಿದರು. ಕಣ್ಣು ಮುಚ್ಚಿ ತೆರೆಯುವುದರೊಳಗೆ ಇಡೀ ಶಾಲೆ ಆವರಣವೇ ರಣಾಂಗಣವಾಗಿ ಮಾರ್ಪಟ್ಟಿತು. ರಕ್ತದ ಪ್ರವಾಹವೇ ಹರಿಯಿತು. ವಿದ್ಯಾರ್ಥಿಗಳ ಆಕ್ರಂದನ ಮುಗಿಲು ಮುಟ್ಟಿತು.

500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಘಟನೆಯಲ್ಲಿ ಶಾಲಾ ಸಿಬ್ಬಂದಿ ಸೇರಿ  126ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 122ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ.

ಶಾಲೆಗೆ ಹೊಂದಿಕೊಂಡಿರುವ ಸ್ಮಶಾನದ ಮೂಲಕ ಉಗ್ರರು ಶಾಲಾ ಆವರಣ ಪ್ರವೇಶಿಸಿದ್ದಾರೆ. ನಂತರ ಶಾಲಾ ಕೊಠಡಿಯಲ್ಲೇ ವಿದ್ಯಾರ್ಥಿಗಳನ್ನು ಸಾಲಾಗಿ ನಿಲ್ಲಿಸಿ ಈ ಹೀನ ಕೃತ್ಯ ನಡೆಸಿದ್ದಾರೆ. ತೆಹ್ರಿಕ್‌ ತಾಲಿಬಾನ್‌  ಉಗ್ರಗಾಮಿ ಸಂಘಟನೆ  ಈ ದಾಳಿಯ ಹೊಣೆ ಹೊತ್ತುಕೊಂಡಿದೆ.

ADVERTISEMENT

ಮೂವರು ಉಗ್ರರನ್ನು ಸೈನಿಕರು ಕೊಂದಿದ್ದಾರೆ, ಇನ್ನೂ ಕೆಲವು ಉಗ್ರರು ಶಾಲಾ ಕೊಠಡಿಯ ಒಳಗಡೆಯೇ ಇದ್ದು, 100ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒತ್ತೆಯಾಳು­ಗಳಾಗಿ ಇರಿಸಿಕೊಂಡಿದ್ದಾರೆ.  ಉಗ್ರರನ್ನು ಮಟ್ಟ ಹಾಕಿ, ವಿದ್ಯಾರ್ಥಿಗಳನ್ನು ರಕ್ಷಿಸಲು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸೇಡಿನ ಕೃತ್ಯ: ನಮ್ಮ ವಿರುದ್ಧ ಕಾರ್ಯಾಚರಣೆ ನಡೆಸುವ, ನಮ್ಮ ಕುಟುಂಬಕ್ಕೆ ಕಿರುಕುಳ ನೀಡುವ ಸೈನಿಕರ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿಯೇ, ಅವರ ಮಕ್ಕಳು ಕಲಿಯುತ್ತಿರುವ ಸೈನಿಕ ಶಾಲೆ ಮೇಲೆ ದಾಳಿ ನಡೆಸಲಾಗಿದೆ. ನಾವು ಅನುಭವಿಸುತ್ತಿರುವ ನೋವು ಏನೆಂದು ಅವರಿಗೆ ಅರ್ಥವಾಗಬೇಕು ಎಂದು ತಾಲಿಬಾನ್‌ ಸಂಘಟನೆ ಹೇಳಿದೆ.

ಉಗ್ರರ ದಾಳಿ ಖಂಡಿಸಿ ಮೂರು ದಿನ ರಾಷ್ಟ್ರೀಯ ಶೋಕಾಚರಣೆ ಪ್ರಕಟಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.