ADVERTISEMENT

ಪಾಕ್ ಗೆ ಎಫ್‌–16 ಕೊಟ್ಟರೆ ಭಾರತದ ವಿರುದ್ಧ ಬಳಕೆ

ಅಮೆರಿಕ ಸಂಸತ್ ಸದಸ್ಯರ ಆತಂಕ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2016, 19:30 IST
Last Updated 28 ಏಪ್ರಿಲ್ 2016, 19:30 IST

ವಾಷಿಂಗ್ಟನ್‌ (ಪಿಟಿಐ): ಪಾಕಿಸ್ತಾನವು ಎಫ್–16 ಯುದ್ಧ ವಿಮಾನಗಳನ್ನು ಭಯೋತ್ಪಾದನೆ ನಿಗ್ರಹಕ್ಕೆ ಬದಲಾಗಿ ಭಾರತದ ವಿರುದ್ಧ ಬಳಸುವ ಸಾಧ್ಯತೆ ಇದೆ ಎಂದು ಅಮೆರಿಕದ ಸಂಸದರು ಆತಂಕ ವ್ಯಕ್ತಪಡಿಸಿದ್ದಾರೆ.

ಎಂಟು ಎಫ್‌–16 ಯುದ್ಧ ವಿಮಾನಗಳನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡುವ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿರುವ ಸಂಸದರು,  ಈ ಬಗ್ಗೆ ಕೈಗೊಂಡಿರುವ ನಿರ್ಧಾರವನ್ನು ಪುನರ್‌ ಪರಿಶೀಲಿಸಬೇಕು ಎಂದು ಅಧ್ಯಕ್ಷ ಬರಾಕ್‌ ಒಬಾಮ ಅವರನ್ನು  ಒತ್ತಾಯಿಸಿದ್ದಾರೆ.

ವಿದೇಶಾಂಗ ವ್ಯವಹಾರಗಳ ಏಷ್ಯಾ ಮತ್ತು ಪೆಸಿಫಿಕ್‌ ರಾಷ್ಟ್ರಗಳ ಕುರಿತಾದ ಉಪಸಮಿತಿಯ ಸಭೆಯಲ್ಲಿ ಹಲವು ಸಂಸದರು ಒಬಾಮ ಆಡಳಿತ ಈ ಬಗ್ಗೆ ಕೈಗೊಂಡಿರುವ ನಿಲುವನ್ನು ಪ್ರಶ್ನಿಸಿದ್ದಾರೆ.

‘ನಾನು ಸೇರಿದಂತೆ ಅನೇಕ ಕಾಂಗ್ರೆಸ್‌(ಸಂಸತ್‌) ಸದಸ್ಯರು  ಎಫ್‌–16  ಯುದ್ಧ ವಿಮಾನಗಳ ಮಾರಾಟದ ನಿರ್ಧಾರವನ್ನು ಗಂಭೀರವಾಗಿ ಪ್ರಶ್ನಿಸಿದ್ದಾರೆ. ಭಾರತ–ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ಇರುವಾಗ ಇಂತಹ ನಿರ್ಧಾರ ಸಕಾಲಿಕವಲ್ಲ.

ಹೀಗಾಗಿ ಈ ಯುದ್ಧ ವಿಮಾನಗಳನ್ನು ಭಾರತ ಅಥವಾ ಇತರ ದೇಶದ ವಿರುದ್ಧ ಬಳಸಬಹುದೇ ಹೊರತು ಭಯೋತ್ಪಾದಕರ ವಿರುದ್ಧ ಅಲ್ಲ ಎಂದು ಸಂಸದ ಮಟ್ಟ್ ಸಲ್ಮೊನ್‌ ತಿಳಿಸಿದ್ದಾರೆ.

ಅಮೆರಿಕದ ಹಿತಾಸಕ್ತಿ ದೃಷ್ಟಿಯಿಂದ  ಈ ವಹಿವಾಟು ಹೇಗೆ ಲಾಭದಾಯಕ ಎಂದು ಸಭೆಯಲ್ಲಿ ಭಾಗವಹಿಸಿದ್ದ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಕ್ಕೆ ಅಮೆರಿಕದ ವಿಶೇಷ ಪ್ರತಿನಿಧಿಯಾಗಿರುವ ರಿಚರ್ಡ್‌ ಒಲ್ಸಾನ್‌ ಅವರನ್ನು ಪ್ರಶ್ನಿಸಿದ್ದಾರೆ. ಯುದ್ಧ  ವಿಮಾನಗಳ ಮಾರಾಟದ ಉದ್ದೇಶ ಮತ್ತು ಸನ್ನಿವೇಶ ಅನುಕೂಲಕರವಾಗಿದೆಯೇ ಎನ್ನುವುದನ್ನು ಸಹ ಅವರು ಪ್ರಶ್ನಿಸಿದ್ದಾರೆ.

ಹಲವು ವರ್ಷಗಳಿಂದ ಭಯೋತ್ಪಾದನೆ ನಿಗ್ರಹಕ್ಕೆ ಅಪಾರ ಹಣಕಾಸಿನ ನೆರವು ನೀಡಲಾಗಿದೆ. ಆದರೂ ಭಯೋತ್ಪಾದನೆ ಸಂಘಟನೆಗಳು  ಪಾಕಿಸ್ತಾನದಲ್ಲಿ ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸಿವೆ. 

ಭಾರತದಲ್ಲಿ ದಾಳಿ ನಡೆಸಲು ಪಾಕಿಸ್ತಾನದ ಸೇನೆ ಪರೋಕ್ಷವಾಗಿ ಭಯೋತ್ಪಾದನೆ ಸಂಘಟನೆಗಳನ್ನು ಬಳಸಿಕೊಳ್ಳುತ್ತಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಹಲವು ಸಂಸದರು ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

‘ಪಾಕಿಸ್ತಾನಕ್ಕೆ ಭಯೋತ್ಪಾದಕರ ನಿಗ್ರಹಕ್ಕೆ ನೆರವು ನೀಡುವಂತಹ ಶಸ್ತ್ರಾಸ್ತ್ರಗಳನ್ನು ನೀಡಬೇಕೇ ಹೊರತು ಭಾರತದ ವಿರುದ್ಧ ಯುದ್ಧ ನಡೆಸಲು ನೆರವಾಗಬಾರದು’ ಎಂದು ಇನ್ನೊಬ್ಬ ಸಂಸದ ಬ್ರಾಡ್‌ ಶೆರ್ಮನ್‌ ಅಭಿಪ್ರಾಯಪಟ್ಟಿದ್ದಾರೆ.

ಉಪಸಮಿತಿ ಅಧ್ಯಕ್ಷ ಇಲಿನಾ ರೋಸ್‌–ಲೆಹ್ಟಿನೆನ್‌ ಅವರು ಸಹ ಸಂಸದರ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.ಆದರೆ, ಒಲ್ಸನ್‌ ಅವರು ಒಬಾಮ ಆಡಳಿತದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಪಾಕಿಸ್ತಾನಕ್ಕೆ ಎಫ್‌–16 ಯುದ್ಧ ವಿಮಾನಗಳನ್ನು ಮಾರಾಟ ಮಾಡುವ ನಿರ್ಧಾರಕ್ಕೆ ಅಮೆರಿಕ ಸೆನೆಟ್‌ ಸದ್ಯಕ್ಕೆ ತಡೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.