ADVERTISEMENT

ಪಿಟಿವಿ ಮೇಲೆ ಪ್ರತಿಭಟನಾಕಾರರ ದಾಳಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 12:45 IST
Last Updated 1 ಸೆಪ್ಟೆಂಬರ್ 2014, 12:45 IST
ಪಾಕಿಸ್ತಾನ್‌ ಟೆಲಿವಿಷನ್‌ (ಪಿಟಿವಿ) ಮೇಲೆ ದಾಳಿ ನಡೆಸಿ ಕಟ್ಟಡದಿಂದ ಹೊರ ಬಂದ ಪ್ರತಿಭಟನಾಕಾರರು –ಎಎಫ್‌ಪಿ ಚಿತ್ರ
ಪಾಕಿಸ್ತಾನ್‌ ಟೆಲಿವಿಷನ್‌ (ಪಿಟಿವಿ) ಮೇಲೆ ದಾಳಿ ನಡೆಸಿ ಕಟ್ಟಡದಿಂದ ಹೊರ ಬಂದ ಪ್ರತಿಭಟನಾಕಾರರು –ಎಎಫ್‌ಪಿ ಚಿತ್ರ   

ಇಸ್ಲಾಮಾಬಾದ್‌ (ಪಿಟಿಐ): ಪಾಕಿಸ್ತಾನದ ಪ್ರಧಾನಮಂತ್ರಿ ನವಾಜ್‌ ಷರೀಫ್‌ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಪಾಕಿಸ್ತಾನ್‌ ತೆಹರಿಕ್ ಎ–ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಮತ್ತು ಪಾಕಿಸ್ತಾನ ಅವಾಮಿ ತೆಹರಿಕ್ (ಪಿಎಟಿ) ಪಕ್ಷದ ಕಾರ್ಯಕರ್ತರು ಸರ್ಕಾರಿ ಸ್ವಾಮ್ಯದ ಪಾಕಿಸ್ತಾನ್‌ ಟೆಲಿವಿಷನ್‌ (ಪಿಟಿವಿ) ಕಚೇರಿ ಮೇಲೆ ಸೋಮವಾರ ದಾಳಿ ನಡೆಸಿದ್ದಾರೆ.

ನೂರಾರು ಸಂಖ್ಯೆಯಲ್ಲಿ ಪಿಟಿವಿ ಪ್ರಸಾರ ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಕ್ಯಾಮೆರಾಗಳನ್ನು ದ್ವಂಸಗೊಳಿಸಿ, ನಿಯಂತ್ರಣ ಕೊಠಡಿಗೆ ನುಗ್ಗಿದ್ದಾರೆ. ಸುಮಾರು 800 ಮಂದಿ ಕಾರ್ಯಕರ್ತರು ಕಟ್ಟಡಕ್ಕೆ ಮುತ್ತಿಗೆ ಹಾಕುತ್ತಿದ್ದಂತೆ ಭದ್ರತಾ ಸಿಬ್ಬಂದಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಸೇನಾಪಡೆಯ ಯೋಧರು ಸ್ಥಳಕ್ಕೆ ಬಂದು ಪ್ರತಿಭಟನಾಕಾರರು ಕಟ್ಟಡದಿಂದ ಹೊರ ಬರುವಂತೆ ಸೂಚನೆ ನೀಡಿದ್ದಾರೆ. ಕೆಲ ಸಮಯದ ನಂತರ ಪ್ರತಿಭಟನಾಕಾರರು ಕಟ್ಟಡದಿಂದ ಹೊರ ನಡೆದಿದ್ದಾರೆ.

‘ಪಿಟಿವಿ ಮೇಲೆ ದಾಳಿ ನಡೆಸಿರುವವರು ನಮ್ಮ ಪಕ್ಷದ ಕಾರ್ಯಕರ್ತರಲ್ಲ. ಒಂದು ವೇಳೆ ನಮ್ಮ ಕಾರ್ಯಕರ್ತರು ಈ ದಾಳಿಯಲ್ಲಿ ಪಾಲ್ಗೊಂಡಿದ್ದರೆ ಅಂಥವರನ್ನು ಪಕ್ಷದಿಂದ ಉಚ್ಛಾಟಿಸಲಾಗುವುದು. ಪ್ರಧಾನ ಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕುವಂತೆ ಅಥವಾ ಪಿಟಿವಿ ಮೇಲೆ ದಾಳಿ ನಡೆಸುವಂತೆ ನಾನು ಯಾರಿಗೂ ಕರೆ ಕೊಟ್ಟಿಲ್ಲ’ ಎಂದು ಪಾಕಿಸ್ತಾನ್‌ ತೆಹರಿಕ್ ಎ–ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಹೇಳಿದ್ದಾರೆ.

ಸೇನಾ ಭದ್ರತೆಯಲ್ಲಿ ಪ್ರಸಾರ
ಪ್ರತಿಭಟನಾಕಾರರು ಪಿಟಿವಿ ಕಟ್ಟಡದಿಂದ ಹೊರ ಬಂದ ಬಳಿಕ ಸೇನೆಯ ಭದ್ರತೆಯಲ್ಲಿ ದೂರದರ್ಶನದ ಪ್ರಸಾರ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT