ADVERTISEMENT

ಪ್ಯಾರಿಸ್‌ ಒಪ್ಪಂದ ಜಾರಿಗೆ ಒತ್ತಾಯ

ಏಜೆನ್ಸೀಸ್
Published 26 ಮೇ 2017, 19:30 IST
Last Updated 26 ಮೇ 2017, 19:30 IST
ಜಿ–7 ಶೃಂಗಸಭೆ ನಡೆಯುತ್ತಿರುವ ಇಟಲಿಯ ಟಾರ್ಮಿನಾದಲ್ಲಿ, ಮುಂದುವರಿದ ದೇಶಗಳ ಯುದ್ಧನೀತಿ ಖಂಡಿಸಿ ಪಾಶ್ಚಿಮಾತ್ಯ ದೇಶಗಳ ನಾಯಕರ ಮುಖವಾಡ ಧರಿಸಿ ಪ್ರತಿಭಟನೆ ನಡೆಸಲಾಯಿತು  –ರಾಯಿಟರ್ಸ್‌ಚಿತ್ರ
ಜಿ–7 ಶೃಂಗಸಭೆ ನಡೆಯುತ್ತಿರುವ ಇಟಲಿಯ ಟಾರ್ಮಿನಾದಲ್ಲಿ, ಮುಂದುವರಿದ ದೇಶಗಳ ಯುದ್ಧನೀತಿ ಖಂಡಿಸಿ ಪಾಶ್ಚಿಮಾತ್ಯ ದೇಶಗಳ ನಾಯಕರ ಮುಖವಾಡ ಧರಿಸಿ ಪ್ರತಿಭಟನೆ ನಡೆಸಲಾಯಿತು –ರಾಯಿಟರ್ಸ್‌ಚಿತ್ರ   

ಟಾರ್ಮಿನಾ, (ಇಟಲಿ) (ರಾಯಿಟರ್ಸ್‌):  ಇಟಲಿಯ ಸ್ವಾಯತ್ತ ಪ್ರಾಂತ್ಯ ಸಿಸಿಲಿಯಲ್ಲಿ ಎರಡು ದಿನಗಳ ಜಿ–7 ಶೃಂಗಸಭೆ ಶುಕ್ರವಾರ ಆರಂಭವಾಗಿದೆ.

ವ್ಯಾಪಾರ ಮತ್ತು ಹವಾಮಾನ ಬದಲಾವಣೆ ಸಂಬಂಧ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೊಂದಿಗೆ ಸದಸ್ಯ ದೇಶಗಳ ಭಿನ್ನಾಭಿಪ್ರಾಯದ ನಡುವೆಯೇ ಈ ವಾರ್ಷಿಕ ಶೃಂಗಸಭೆ ಆಯೋಜನೆಯಾಗಿದೆ. ಇದರಿಂದ, ಜಾಗತಿಕ ಭಯೋತ್ಪಾದನೆಯ ವಿರುದ್ಧ ಒಮ್ಮತ ಪ್ರದರ್ಶನಕ್ಕೆ ಹಿನ್ನಡೆ ಉಂಟಾಗಬಹುದೆಂಬ ಆತಂಕ ವ್ಯಕ್ತವಾಗಿದೆ.ನ್ಯಾಟೊ ದೇಶಗಳು ಮಿತ್ರ ಪಡೆಗಳ  ಮೇಲೆ ಅತಿ ಕಡಿಮೆ ವೆಚ್ಚ ಮಾಡುತ್ತಿವೆ ಎಂದು ಟ್ರಂಪ್‌ ಅವರು ಹಿಂದಿನ ದಿನವಷ್ಟೇ ಹರಿಹಾಯ್ದಿದ್ದರು.

ಪ್ಯಾರಿಸ್‌  ಒಪ್ಪಂದ– ಅಮೆರಿಕ ನಿರಾಕರಣೆ: ಪ್ಯಾರಿಸ್‌ ಹವಾಮಾನ ಒಪ್ಪಂದ ಅನುಷ್ಠಾನಕ್ಕೆ ಬದ್ಧವಾಗಿ ಇತರ ಜಿ7 ದೇಶಗಳೊಂದಿಗಿನ ಹೇಳಿಕೆಗೆ ಸಹಿ ಹಾಕಲು ಅಮೆರಿಕ ನಿರಾಕರಿಸಿದೆ.

ADVERTISEMENT

ಹಲವು ವಿಷಯ ಚರ್ಚೆ: ಜಾಗತಿಕ ಭಯೋತ್ಪಾದನೆ, ಸಿರಿಯಾ ಅಂತರ್ಯುದ್ಧ, ಉತ್ತರ ಕೊರಿಯಾ ಬೆದರಿಕೆ  ಮತ್ತು ಜಾಗತಿಕ ಆರ್ಥಿಕತೆ  ವಿಷಯಗಳು ಶೃಂಗಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾಗಲಿವೆ. ‘ಇದೊಂದು ಸವಾಲಿನ ಶೃಂಗಸಭೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ’ ಎಂದು ಐರೋಪ್ಯ ಒಕ್ಕೂಟದ ಅಧ್ಯಕ್ಷ ಡೊನಾಲ್ಡ್‌ ಟಸ್ಕ್‌ ಒಪ್ಪಿಕೊಂಡಿದ್ದಾರೆ.

ಕೆಲವು ವಿಷಯಗಳಲ್ಲಿ ಟ್ರಂಪ್‌ ಅವರು ಹೊಂದಿರುವ ನಿಲುವುಗಳನ್ನು ಬದಲಿಸಿಕೊಳ್ಳಲು ಈ ಶೃಂಗಸಭೆ ನೆರವಾಗಲಿದೆ ಎಂಬ ವಿಶ್ವಾಸವನ್ನು ಜರ್ಮನಿ ಚಾನ್ಸಲರ್‌ ಏಂಜೆಲಾ ಮರ್ಕೆಲ್‌, ಫ್ರಾನ್ಸ್‌ನ ನೂತನ ಅಧ್ಯಕ್ಷ  ಎಮ್ಯಾನುಯಲ್‌ ಮ್ಯಾಕ್ರನ್‌  ಹೊಂದಿದ್ದಾರೆ.

ಮೂವರಿಗೆ ಮೊದಲ ಶೃಂಗಸಭೆ: ಬ್ರಿಟನ್‌ ಪ್ರಧಾನಿ ತೆರೆಸಾ ಮೇ, ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್‌  ಹಾಗೂ ಟ್ರಂಪ್‌ ಅವರು ಭಾಗವಹಿಸುತ್ತಿರುವ ಮೊದಲ ಅಂತರರಾಷ್ಟ್ರೀಯ ಶೃಂಗಸಭೆ ಇದಾಗಿದೆ.

ರಷ್ಯಾಕ್ಕೆ ಅವಕಾಶ ಇಲ್ಲ:  ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಕ್ಕೆ ಅವಕಾಶ ನೀಡಿಲ್ಲ. 2014ರಲ್ಲಿ ಉಕ್ರೇನ್‌ನ ಕ್ರಿಮಿಯಾವನ್ನು ಸ್ವಾಧೀನಪಡಿಸಿಕೊಂಡ ನಂತರ ಅದನ್ನು ಗುಂಪಿನಿಂದ ಹೊರ ಹಾಕಲಾಗಿತ್ತು.

ದಿಗ್ಬಂಧನ ಮುಂದುವರಿಕೆಗೆ ಒತ್ತಾಯ:  ರಷ್ಯಾ ಮೇಲೆ ದಿಗ್ಬಂಧನ ಮುಂದುವರಿಸಬೇಕು ಎಂದು ಡೊನಾಲ್ಡ್‌ ಟಸ್ಕ್‌ ಅವರು ಜಿ7 ದೇಶಗಳನ್ನು ಒತ್ತಾಯಿಸಿದರು. ಆದರೆ ಈ ಸಂಬಂಧ ಯಾವುದೇ ತೀರ್ಮಾನ ಕೈಗೊಳ್ಳುವ ಸ್ಥಿತಿಯಲ್ಲಿ ಇಲ್ಲ ಎಂದು ಅಮೆರಿಕ ಪ್ರತಿಕ್ರಿಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.