ADVERTISEMENT

ಬಾಂಗ್ಲಾದೇಶ: ಹುಲಿಗಳ ಸಂಖ್ಯೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2015, 19:30 IST
Last Updated 27 ಜುಲೈ 2015, 19:30 IST

ಢಾಕಾ (ಪಿಟಿಐ): ವಿಶ್ವದ ಅತಿ ದೊಡ್ಡ ಕಾಂಡ್ಲಾವನವಾದ ಸುಂದರಬನದಲ್ಲಿ ಕೇವಲ 106 ಹುಲಿಗಳು ಇವೆ! ಅಪಾಯದ ಅಂಚಿನಲ್ಲಿರುವ  ಪ್ರಾಣಿಗಳ ಬೇಟೆ ಹೆಚ್ಚಾಗಿದ್ದರಿಂದ ಬಾಂಗ್ಲಾದೇಶದ ಸುಂದರಬನದಲ್ಲಿ ಹುಲಿಗಳ ಸಂಖ್ಯೆ ಅವನತಿಯತ್ತ ಸಾಗಿದೆ ಎಂದು ಭಾರತ– ಬಾಂಗ್ಲಾದೇಶ ಸಮೀಕ್ಷೆ ತಿಳಿಸಿದೆ.

ಪ್ರಸಕ್ತ ವರ್ಷದ ಹುಲಿಗಣತಿಗೆ ಕೆಲವು ವೈಜ್ಞಾನಿಕ ವಿಧಾನಗಳನ್ನು ಬಳಸಿದ್ದು, ಸುಂದರಬನದಲ್ಲಿ ಕೇವಲ 106 ಹುಲಿಗಳು ಇವೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಹೆಚ್ಚಿದ ವನ್ಯ ಜೀವಿ ಬೇಟೆಗಳಿಂದ ಹುಲಿಗಳ ಸಂಖ್ಯೆ ಇಳಿಕೆಯಾಗುತ್ತಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಡಾ. ತಪನ್‌ ಕುಮಾರ್‌ ಡೇ ತಿಳಿಸಿದ್ದಾರೆ.

2004ರಲ್ಲಿ ನಡೆಸಿದ ಹುಲಿ ಗಣತಿ ಪ್ರಕಾರ, ಬಾಂಗ್ಲಾದೇಶದ ಸುಂದರ ಬನ ಅರಣ್ಯದಲ್ಲಿ 440 ಹುಲಿಗಳು ಇದ್ದವು.  ಆದರೆ ಆ ಗಣತಿಗೆ ವಿಶ್ವಾಸಾರ್ಹ ಮತ್ತು ವೈಜ್ಞಾನಿಕ ವಿಧಾನಗಳನ್ನು ಬಳಸಿಕೊಂಡಿರಲಿಲ್ಲ ಎಂದು ವನ್ಯ ಜೀವಿ ಜೀವ ಶಾಸ್ತ್ರಜ್ಞ ಡಾ. ಮೊನಿರುಲ್‌ ಎಚ್‌. ಖಾನ್‌ ತಿಳಿಸಿದ್ದಾರೆ.

2004ರ ಗಣತಿ ಸುಂದರಬನ ಅರಣ್ಯದ ಹುಲಿಗಳ ನಿಖರ ಸಂಖ್ಯೆಯನ್ನು ತಿಳಿಸಿರಲಿಲ್ಲ. ಆದರೂ, ಸಮರ್ಪಕ ಅರಣ್ಯ ನಿರ್ವಹಣೆ ಕೊರತೆ ಹಾಗೂ ಪ್ರಾಣಿಗಳ ಬೇಟೆ ಕಾರಣದಿಂದ ಇತ್ತೀಚೆಗೆ ಈ ಕಾಡಿನಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅವರು ತಿಳಿಸಿದ್ದಾರೆ.

ಬಾಂಗ್ಲಾದೇಶ– ಭಾರತ ಜಂಟಿ ಹುಲಿ ಗಣತಿ ಯೋಜನೆ 2015ರ ಹುಲಿಗಣತಿಯನ್ನು ನಡೆಸಿದ್ದು, ಸುಂದರ ಬನ ಅರಣ್ಯದಲ್ಲಿ ಕ್ಯಾಮೆರಾ ಇಟ್ಟು ಹುಲಿಗಳ 1,500 ಚಿತ್ರಗಳು ಹಾಗೂ ಹೆಜ್ಜೆಗುರುತುಗಳನ್ನು ತೆಗೆದಿದೆ ಎಂದು ‘ಢಾಕಾ ಟ್ರಿಬ್ಯೂನ್‌’ ತಿಳಿಸಿದೆ.
*
ಅಂಕಿ ಅಂಶ
* 440 -2004ರಲ್ಲಿ ಸುಂದರಬನದಲ್ಲಿ ಇದ್ದ ಹುಲಿಗಳು
* 1ಲಕ್ಷ -1900ರ ಅವಧಿಯಲ್ಲಿ ವಿಶ್ವದಲ್ಲಿ ಇದ್ದ ಹುಲಿಗಳ ಸಂಖ್ಯೆ
* 3ಸಾವಿರ -ವಿಶ್ವದಲ್ಲಿ ಸದ್ಯ ಇರುವ ಹುಲಿಗಳ ಸಂಖ್ಯೆ
* 49 -2001–2014ರ ಅವಧಿಯಲ್ಲಿ ಮೃತಪಟ್ಟ ಹುಲಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.