ADVERTISEMENT

ಬ್ರಿಟನ್‌ಗೆ ಹೋಗುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖ

ಪಿಟಿಐ
Published 17 ಜನವರಿ 2017, 19:30 IST
Last Updated 17 ಜನವರಿ 2017, 19:30 IST

ಲಂಡನ್‌ : ಶಿಕ್ಷಣಕ್ಕಾಗಿ ಬ್ರಿಟನ್‌ಗೆ ಬರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತ, ವೀಸಾ ವಿಚಾರದಲ್ಲಿ ಇರುವ ಗೊಂದಲಗಳನ್ನು ನಿವಾರಿಸುವುದು ಅಗತ್ಯ ಎಂದಿದೆ.

ಬ್ರಿಟನ್‌ಗೆ ಭಾರತೀಯ ಹೈಕಮಿಷನರ್‌ ಆಗಿ ಕಳೆದ ತಿಂಗಳಿನಲ್ಲಿ ಅಧಿಕಾರ ಸ್ವೀಕರಿಸಿರುವ ವೈ.ಕೆ. ಸಿನ್ಹಾ, ‘ಕಲಿಕೆಗಾಗಿ ಅಮೆರಿಕ, ಆಸ್ಟ್ರೇಲಿಯದಂಥ ರಾಷ್ಟ್ರಗಳಿಗೆ ಹೋಗುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ.  ಯುರೋಪ್‌ ರಾಷ್ಟ್ರಗಳಿಗೂ ಹೆಚ್ಚು ವಿದ್ಯಾರ್ಥಿಗಳು ಹೋಗುತ್ತಿದ್ದಾರೆ’ ಎಂದಿದ್ದಾರೆ.

ಲಂಡನ್‌ನ ಇಂಡಿಯಾ ಹೌಸ್‌ನಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಸಿನ್ಹಾ, ‘2010ರಲ್ಲಿ ಬ್ರಿಟನ್‌ನಲ್ಲಿ ಶಿಕ್ಷಣ ಪಡೆಯುತ್ತಿದ್ದ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 40ಸಾವಿರದ ಆಸುಪಾಸಿನಲ್ಲಿತ್ತು. ಅದು ಈಗ 19ಸಾವಿರಕ್ಕೆ ಕುಸಿದಿದೆ. ಆದರೆ 2010ರಲ್ಲಿ ಮೆರಿಕದಲ್ಲಿ ಶಿಕ್ಷಣ ಪಡೆಯುತ್ತಿದ್ದ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 1.04 ಲಕ್ಷ ಇದ್ದರೆ ಈಗ ಅದು 1.66 ಲಕ್ಷಕ್ಕೆ ಏರಿಕೆಯಾಗಿದೆ’ ಎಂದು ತಿಳಿಸಿದರು.

2010ರಲ್ಲಿ ಭಾರತದ ಸುಮಾರು 19ಸಾವಿರ ವಿದ್ಯಾರ್ಥಿಗಳು ಆಸ್ಟ್ರೇಲಿಯದಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಈಗ ಆ ಸಂಖ್ಯೆ 40ಸಾವಿರಕ್ಕೆ ಏರಿದೆ. ಇತ್ತೀಚಿನವರೆಗೂ ಬ್ರಿಟನ್‌ ಭಾರತೀಯ ವಿದ್ಯಾರ್ಥಿಗಳ ಮೊದಲ ಆಯ್ಕೆಯಾಗಿತ್ತು. ಈಗಿನ ಕುಸಿತವನ್ನು ನೋಡಿದರೆ ಏನೋ ಸಮಸ್ಯೆ ಇದೆ ಎಂದು ಭಾಸವಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು  ಬ್ರಿಟನ್‌ಗೆ ಆಕರ್ಷಿಸುವ ನಿಟ್ಟಿನಲ್ಲಿ ಕೆಲಸವಾಗಬೇಕು. ಯಾಕೆಂದರೆ ಭಾರತೀಯ ವಿದ್ಯಾರ್ಥಿಗಳು ಯಾವ ದೇಶಕ್ಕೆ ಹೋದರೂ ಅತ್ಯುತ್ತಮ ಸಾಧನೆ ಮಾಡುತ್ತಾರೆ ಎಂದು ಸಿನ್ಹಾ ಹೇಳಿದರು.

ಬ್ರಿಟನ್‌ನ ವಿಶ್ವವಿದ್ಯಾಲಯಗಳು ಈಗಲೂ ಒಳ್ಳೆಯ ಕೆಲಸ ಮಾಡುತ್ತಿವೆ. ಆದರೆ ವೀಸಾದಲ್ಲಿ ಇರುವ ಗೊಂದಲವನ್ನು ಸರಿಪಡಿಸುವುದು ಅಗತ್ಯ ಎನಿಸುತ್ತದೆ. ಎರಡೂ ಸರ್ಕಾರಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.