ADVERTISEMENT

ಬ್ರಿಟನ್‌ನ 23 ರಾಜತಾಂತ್ರಿಕರು ರಷ್ಯಾದಿಂದ ಹೊರಕ್ಕೆ

ಏಜೆನ್ಸೀಸ್
Published 17 ಮಾರ್ಚ್ 2018, 19:30 IST
Last Updated 17 ಮಾರ್ಚ್ 2018, 19:30 IST
ಬ್ರಿಟನ್‌ನ 23 ರಾಜತಾಂತ್ರಿಕರು ರಷ್ಯಾದಿಂದ ಹೊರಕ್ಕೆ
ಬ್ರಿಟನ್‌ನ 23 ರಾಜತಾಂತ್ರಿಕರು ರಷ್ಯಾದಿಂದ ಹೊರಕ್ಕೆ   

ಮಾಸ್ಕೊ: ರಷ್ಯಾದ ಮಾಜಿ ಡಬಲ್‌ ಏಜೆಂಟ್‌ ಸರ್ಗಿ ಸ್ಕ್ರಿಪಲ್‌ ಮೇಲೆ ನಡೆದ ರಾಸಾಯನಿಕ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ದೇಶದಲ್ಲಿರುವ ಬ್ರಿಟನ್‌ನ 23 ರಾಜತಾಂತ್ರಿಕ ಅಧಿಕಾರಿಗಳನ್ನು ವಾಪಸ್ ಕಳುಹಿಸುವುದಾಗಿ ರಷ್ಯಾ ಶನಿವಾರ ಘೋಷಣೆ ಮಾಡಿದೆ.

ಸಹ ತನ್ನ ದೇಶದಲ್ಲಿರುವ ರಾಜತಾಂತ್ರಿಕರನ್ನು ಕಳುಹಿಸುವುದಾಗಿ ಬ್ರಿಟನ್‌ ಕೆಲದಿನಗಳ ಹಿಂದೆ ಹೇಳಿತ್ತು.

ಬ್ರಿಟಿಷ್‌ ಕೌನ್ಸಿಲ್‌, ಸಾಂಸ್ಕೃತಿಕ ಸಂಬಂಧ ಹಾಗೂ ಶೈಕ್ಷಣಿಕ ಅವಕಾಶ ವೃದ್ಧಿಸಲು ಕೆಲಸ ಮಾಡುತ್ತಿರುವ ಬ್ರಿಟನ್‌ನ ಅಂತರರಾಷ್ಟ್ರೀಯ ಸಂಸ್ಥೆಯೊಂದಿಗಿನ ಎಲ್ಲ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ರಷ್ಯಾ ತಿಳಿಸಿದೆ.

ADVERTISEMENT

‘ಇಲ್ಲಿನ ಬ್ರಿಟಿಷ್‌ ದೂತಾವಾಸ ಕಚೇರಿಯ 23 ರಾಜತಾಂತ್ರಿಕ ಅಧಿಕಾರಿಗಳನ್ನು ಇನ್ನೊಂದು ವಾರದೊಳಗೆ ದೇಶದಿಂದ ಹೊರಹಾಕಲಾಗುವುದು’ ಎಂದು ರಷ್ಯಾ ವಿದೇಶಾಂಗ ಸಚಿವಾಲಯ ಹೇಳಿದೆ. 

ಬ್ರಿಟನ್‌ನ ಪ್ರಚೋದನೆಗೆ ಹಾಗೂ ಆಧಾರರಹಿತ ಆರೋಪಗಳಿಗೆ ಇದು ಪ್ರತಿಕ್ರಿಯೆ ಎಂದು ಅದು ತಿಳಿಸಿದೆ.

‘ಇದೇ ರೀತಿಯ ದ್ವೇಷದ ಕ್ರಮಗಳನ್ನು ಮುಂದುವರಿಸಿದರೆ, ಅದಕ್ಕೆ ಪ್ರತಿಯಾಗಿ ತಕ್ಕ ಉತ್ತರ ನೀಡುವ ಹಕ್ಕು ನಮಗಿದೆ’ ಎಂದೂ ಅದು ಸ್ಪಷ್ಟವಾಗಿ ಎಚ್ಚರಿಸಿದೆ.

ಡಬಲ್‌ ಏಜೆಂಟ್‌ ಸರ್ಗಿ ಸ್ಕ್ರಿಪಲ್‌ ಮತ್ತು ಅವರ ಮಗಳು ಯುಲಿಯಾ ಇಂಗ್ಲೆಂಡ್‌ನ ಸಾಲಿಸ್ಟರಿ ನಗರದ ವ್ಯಾಪಾರಿ ಮಳಿಗೆಯ ಹೊರಗೆ ಇದೇ 4ರಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಅವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಬ್ರಿಟನ್‌ ರಾಯಭಾರಿಗೆ ಸಮನ್ಸ್‌
ರಾಸಾಯನಿಕ ದಾಳಿ ಪ್ರಕರಣವು ತೀವ್ರ ಸ್ವರೂಪ ಪಡೆಯುತ್ತಿರುವ ಬೆನ್ನಲ್ಲೇ,  ಬ್ರಿಟನ್‌  ರಾಯಭಾರಿ ಲೌರಿ ಬ್ರಿಸ್ಟೊ ಅವರಿಗೆ ರಷ್ಯಾದ ವಿದೇಶಾಂಗ ಸಚಿವಾಲಯ ಶನಿವಾರ ಸಮನ್ಸ್‌ ಜಾರಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.