ADVERTISEMENT

ಬ್ರೆಜಿಲ್‌: ಜೈಲಿನಲ್ಲಿ ರಕ್ತಪಾತ 26 ಸಾವು

ಏಜೆನ್ಸೀಸ್
Published 16 ಜನವರಿ 2017, 19:30 IST
Last Updated 16 ಜನವರಿ 2017, 19:30 IST
ಕೈದಿಗಳ ಮಾರಾಮಾರಿ ಘಟನೆ ತಿಳಿದ ಬಳಿಕ ಜೈಲಿನ ಮುಂದೆ ನೆರೆದಿದ್ದ ಕೈದಿಗಳ ಸಂಬಂಧಿಕರು   –ರಾಯಿಟರ್ಸ್‌ಚಿತ್ರ
ಕೈದಿಗಳ ಮಾರಾಮಾರಿ ಘಟನೆ ತಿಳಿದ ಬಳಿಕ ಜೈಲಿನ ಮುಂದೆ ನೆರೆದಿದ್ದ ಕೈದಿಗಳ ಸಂಬಂಧಿಕರು –ರಾಯಿಟರ್ಸ್‌ಚಿತ್ರ   

ನಟಾಲ್‌ (ಬ್ರೆಜಿಲ್‌) : ರಿಯೊ ಗ್ರಾಂಡ್‌ ಡೊ ನಾರ್ಟಿಯದ ಈಶಾನ್ಯ ರಾಜ್ಯದಲ್ಲಿರುವ ಅಲಕಾಕುಝಾ ಜೈಲಿನಲ್ಲಿ ಶನಿವಾರ ಕೈದಿಗಳ ಮಧ್ಯೆ ನಡೆದ ಮಾರಾಮಾರಿಯಲ್ಲಿ 26 ಜನ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೈಲಿನಲ್ಲಿ ನಡೆದ ರಕ್ತಪಾತದಲ್ಲಿ ಬಹುತೇಕ ಕೈದಿಗಳ ಶಿರಚ್ಛೇದ ಮತ್ತು ಅಂಗಾಗಗಳನ್ನು ಕತ್ತರಿಸಿ ಕೊಲೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಬ್ರೆಜಿಲ್‌ನ ಅತಿದೊಡ್ಡ ಮಾದಕ ವಸ್ತು ಪೂರೈಕೆ ಜಾಲವಾಗಿರುವ ಫರ್ಸ್ಟ್‌ ಕ್ಯಾಪಿಟಲ್‌ ಕಮಾಂಡ್‌ (ಎಫ್‌ಸಿಸಿ) ಮತ್ತು ವಿರೋಧಿ ಗುಂಪು ರೆಡ್‌ ಕಮಾಂಡ್‌ ಮಧ್ಯೆ ಈ ಮಾರಾಮಾರಿ ನಡೆದಿರಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ.

ಮಾದಕ ವಸ್ತು ಮಾರುಕಟ್ಟೆ ಮತ್ತು ಕಳ್ಳಸಾಗಾಣೆ ಮಾರ್ಗದ ಮೇಲೆ ನಿಯಂತ್ರಣ ಸಾಧಿಸಲು ಎರಡು ಗುಂಪುಗಳ ಮಧ್ಯೆ ಈ ಮಾರಾಮಾರಿ ನಡೆದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಜನವರಿ ಮೊದಲ ವಾರದಿಂದ ಬ್ರೆಜಿಲ್‌ನ ವಿವಿಧ ಜೈಲುಗಳಲ್ಲಿ ನಡೆದ ಕೈದಿಗಳ ಮಾರಾಮಾರಿಯಲ್ಲಿ ಸುಮಾರು 100 ಮಂದಿ ಮೃತಪಟ್ಟಿದ್ದಾರೆ ಅಧಿಕಾರಿಗಳು ಹೇಳಿದ್ದಾರೆ.

‘ರಕ್ತಪಾತದಲ್ಲಿ 30 ಕೈದಿಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ, 26 ಮಂದಿ ಮೃತಪಟ್ಟಿರುವುದು ಖಚಿತವಾಗಿದೆ’ ಎಂದು ಬ್ರೆಜಿಲ್‌ನ ಸಾರ್ವಜನಿಕ ಸುರಕ್ಷತೆ ವಿಭಾಗದ ವ್ಯವಸ್ಥಾಪಕ ಕೈಯೊ ಬೆಝೆರ್ರಾ ತಿಳಿಸಿದ್ದಾರೆ.

ಜೈಲಿನಲ್ಲಿ ರಕ್ತಪಾತ ನಡೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರೂ ಅವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಕೈದಿಯೊಬ್ಬರ ಸಹೋದರಿ ಆ್ಯಡ್ರಿಯಾನಾ ಫೆಲಿಝ್‌ ತಿಳಿಸಿದ್ದಾರೆ.

ಭದ್ರತಾ ಪಡೆಗಳು ಜೈಲನ್ನು ಸುತ್ತುವರೆದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನಟಾಲ್‌ ನಗರ ಹೊರ ವಲಯದಲ್ಲಿರುವ ಜೈಲಿನಲ್ಲಿರಬೇಕಾದ ಕೈದಿಗಳ ಸಂಖ್ಯೆ 620. ಆದರೆ, ಸದ್ಯ ಜೈಲಿನಲ್ಲಿ 1083 ಕೈದಿಗಳಿದ್ದಾರೆ ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.