ADVERTISEMENT

ಭದ್ರತಾ ಮಂಡಳಿ ಪುನರ್‌ರಚಿಸಿ

ಪಿಟಿಐ
Published 24 ಏಪ್ರಿಲ್ 2018, 19:30 IST
Last Updated 24 ಏಪ್ರಿಲ್ 2018, 19:30 IST
ಸಚಿವೆ ಸುಷ್ಮಾ ಸ್ವರಾಜ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹಸ್ತಲಾಘವ ಮಾಡಿದರು
ಸಚಿವೆ ಸುಷ್ಮಾ ಸ್ವರಾಜ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹಸ್ತಲಾಘವ ಮಾಡಿದರು   

ಬೀಜಿಂಗ್: ಗಂಭೀರ ಪರಿಣಾಮ ಬೀರುವ ಕೆಲವು ಭದ್ರತಾ ಸಮಸ್ಯೆಗಳಿಗೆ ಸ್ಪಂದಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ವಿಫಲವಾಗಿದೆ ಹಾಗೂ ಕೆಲವೊಮ್ಮೆ ಅದಕ್ಕೆ ಈ ನಿಟ್ಟಿನಲ್ಲಿ ಸ್ಪಂದಿಸುವ ಮನಸು ಕೂಡ ಇರುವುದಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಅವರು ಮಂಗಳವಾರ ಮಾತನಾಡಿದರು. ಭದ್ರತಾ ಮಂಡಳಿಯ ಪುನರ್‌ರಚನೆಗೆ ಒತ್ತಾಯಿಸಿದ ಅವರು, ಜಾಗತಿಕ ಭಯೋತ್ಪಾದನೆ ಹಾಗೂ ರಕ್ಷಣಾ ನೀತಿಯ ಕುರಿತೂ ಪ್ರಸ್ತಾಪಿಸಿದರು.

‘ಭದ್ರತಾ ಮಂಡಳಿ ಸಶಕ್ತವಾಗಬೇಕಾದರೆ ಅದರ ವಿಸ್ತರಣೆ ಅತ್ಯಗತ್ಯ’ ಎಂದು ಅವರು ಒತ್ತಿ ಹೇಳಿದರು.

ADVERTISEMENT

ಚೀನಾ, ರಷ್ಯಾ, ಪಾಕಿಸ್ತಾನ, ಕಿರ್ಗಿಸ್ತಾನ, ಕಜಕಿಸ್ತಾನ, ತಜಕಿಸ್ತಾನ, ಉಜ್ಬೆಕಿಸ್ತಾನದ ವಿದೇಶಾಂಗ ಸಚಿವರು ಹಾಗೂ ಸಂಘಟನೆಯ ಪ್ರಧಾನ ಕಾರ್ಯದರ್ಶಿ ರಶೀದ್ ಅಲಿಮೊವ್ ಸಭೆಯಲ್ಲಿ ಹಾಜರಿದ್ದರು.

ಮೂಡದ ಸಹಮತ: ತನ್ನ ಮಹತ್ವಾಕಾಂಕ್ಷಿ ಯೋಜನೆಯಾದ ‘ಒಂದು ವಲಯ ಒಂದು ರಸ್ತೆ’ಗೆ ಭಾರತದ ಸಹಮತ ಪಡೆಯಲು ಚೀನಾ ವಿಫಲವಾಗಿದೆ.

ಶಾಂಘೈ ಸಹಕಾರ ಸಂಘಟನೆಯ ಸದಸ್ಯ ರಾಷ್ಟ್ರಗಳ ರಕ್ಷಣಾ ಸಚಿವರಸಭೆಯಲ್ಲಿ ಸಚಿವೆ ನಿರ್ಮಲಾ ಸೀತಾ ರಾಮನ್ ಮಂಗಳವಾರ ಭಾಗವಹಿಸಿದ ವೇಳೆ ಈ ಸಂಬಂಧ ಚರ್ಚೆ ನಡೆದಿದೆ. ಆದರೆ ಹೆಚ್ಚಿನ ವಿವರಗಳು ಬಹಿರಂಗ ವಾಗಿಲ್ಲ.

ಏಷ್ಯಾದ ದೇಶಗಳೊಂದಿಗೆ ಚೀನಾದ ರಸ್ತೆ ಸಂಪರ್ಕ ಸಾಧಿಸುವ ಈ ಯೋಜನೆಗೆ ಭಾರತ ಸಹಿ ಮಾಡಿಲ್ಲ. ಇದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ಕನಸಿನ ಯೋಜನೆಯೂ ಹೌದು.

ವಿವಾದಕ್ಕೆ ಕಾರಣವಾಗದಿರಲಿ: ‘ಭಾರತ ಮತ್ತು ಚೀನಾ ನಡುವೆ ಇರುವ ಭಿನ್ನಾ‌ಭಿಪ್ರಾಯವು ವಿವಾದಕ್ಕೆ ದಾರಿ ಮಾಡಿಕೊಡಬಾರದು’ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ‘ದೋಕಲಾ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು ಸಚಿವೆ ಈ ಹೇಳಿಕೆ ನೀಡಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾವುದೇ ಒಪ್ಪಂದ ಇಲ್ಲ
‘ವುಹಾನ್ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಯಾವುದೇ ಒಪ್ಪಂದಕ್ಕೆ ಸಹಿ ಮಾಡುವುದಿಲ್ಲ ಅಥವಾ ಜಂಟಿ ಹೇಳಿಕೆ ಬಿಡುಗಡೆ ಮಾಡುವುದಿಲ್ಲ’ ಎಂದು ಚೀನಾದ ಉಪ ವಿದೇಶಾಂಗ ಸಚಿವ ಕಾಂಗ್ ಷುವಾನ್ಯು ಹೇಳಿದರು.

‘ಆದರೆ ಪರಸ್ಪರ ವಿಶ್ವಾಸ ವೃದ್ಧಿ ಹಾಗೂ ಪರಿಹಾರ ಕಾಣದ ವಿಚಾರಗಳ ಸಂಬಂಧ ಚರ್ಚೆಗಳು ನಡೆಯಲಿವೆ’ ಎಂದು ಅವರು ತಿಳಿಸಿದರು.

‘ವಿಶ್ವಾಸದ ಕೊರತೆಯಿಂದಾಗಿ ದೋಕಲಾ ಬಿಕ್ಕಟ್ಟು ಉದ್ಭವಿಸಿತ್ತು. ಗಡಿ ತಕರಾರು ಬಗೆಹರಿಯಲು ಪರಸ್ಪರ ವಿಶ್ವಾಸವೇ ಮುಖ್ಯ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.