ADVERTISEMENT

‘ಭಾರತಕ್ಕೆ ನಿರುದ್ಯೋಗ ದೊಡ್ಡ ಸವಾಲು‘

ಪಿಟಿಐ
Published 19 ಸೆಪ್ಟೆಂಬರ್ 2017, 19:30 IST
Last Updated 19 ಸೆಪ್ಟೆಂಬರ್ 2017, 19:30 IST
‘ಭಾರತಕ್ಕೆ ನಿರುದ್ಯೋಗ ದೊಡ್ಡ ಸವಾಲು‘
‘ಭಾರತಕ್ಕೆ ನಿರುದ್ಯೋಗ ದೊಡ್ಡ ಸವಾಲು‘   

ವಾಷಿಂಗ್ಟನ್‌: ಭಾರತದ ಭದ್ರತೆ ಮತ್ತು ಅಭಿವೃದ್ಧಿಗೆ ಅಸಹಿಷ್ಣುತೆ ಮತ್ತು ನಿರುದ್ಯೋಗವು ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಇಲ್ಲಿ ಹೇಳಿದರು.

ಅಮೆರಿಕದಲ್ಲಿ ಎರಡು ವಾರಗಳ ಪ್ರವಾಸದಲ್ಲಿರುವ ರಾಹುಲ್‌, ಅಲ್ಲಿರುವ ಭಾರತೀಯ ಹಾಗೂ ದಕ್ಷಿಣ ಏಷ್ಯಾದ ತಜ್ಞರ ಜೊತೆ ಸಭೆ ನಡೆಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದರು. ‘ಸೆಂಟರ್‌ ಫಾರ್‌ ಅಮೆರಿಕನ್‌  ಪ್ರೋಗ್ರೆಸ್‌’ ಈ ಕಾರ್ಯಕ್ರಮ ಆಯೋಜಿಸಿತ್ತು.

ಭಾರತದಲ್ಲಿನ ನಿರುದ್ಯೋಗ ಸಮಸ್ಯೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ರಾಹುಲ್‌, ಇದು ಅಪಾಯಕಾರಿ ಪರಿಸ್ಥಿತಿಯನ್ನು ತಂದೊಡ್ಡಿದೆ ಎಂದರು.

ADVERTISEMENT

ಈ ಪ್ರವಾಸದ ಅವಧಿಯಲ್ಲಿ, ’ವಾಷಿಂಗ್ಟನ್‌ ಪೋಸ್ಟ್‌’ ಪತ್ರಿಕೆಯ ಸಂಪಾದಕೀಯ ಮಂಡಳಿಯ ಜೊತೆ ಅನೌಪಚಾರಿಕ ಮಾತುಕತೆ ನಡೆಸಿ ಭಾರತದ ಸ್ಥಿತಿಗತಿ ಬಗ್ಗೆ ಚರ್ಚಿಸಿದರು. ರಾಹುಲ್‌ ಜೊತೆ ಮಾತುಕತೆ ನಡೆಸಿದ ಬಳಿಕ ಪ್ರತಿಕ್ರಿಯಿಸಿರುವ ಅಮೆರಿಕದ ತಂತ್ರಜ್ಞ ಪುನೀತ್‌ ಆಹ್ಲುವಾಲಿಯಾ, ‘ರಾಹುಲ್‌ ಅವರು ಎಲ್ಲಾ ಸಮಸ್ಯೆಗಳ ಮೂಲವನ್ನು ಚೆನ್ನಾಗಿ ಅರ್ಥೈಸಿಕೊಂಡಿರುವ ನಾಯಕ. ಅವರಿಗೆ ಎಲ್ಲ ಘಟನೆಗಳ ಕುರಿತು ಒಳ್ಳೆಯ ಮಾಹಿತಿ ಇದೆ’ ಎಂದು ಬಣ್ಣಿಸಿದ್ದಾರೆ.

ರಾಹುಲ್‌ ಅವರ ಎಲ್ಲಾ ಸಭೆಗಳಲ್ಲಿ ಭಾಗವಹಿಸಿರುವ ಇನ್ನೊಬ್ಬ ತಜ್ಞ ಸ್ಯಾಮ್‌ ಪಿತ್ರೋಡಾ ‘ರಾಹುಲ್‌ ಅವರ ಬಗ್ಗೆ ನಮಗೆ ಜನರು ಏನು ಮಾಹಿತಿ ನೀಡಿದ್ದರೋ ಅದಕ್ಕಿಂತ ಸಂಪೂರ್ಣ ಭಿನ್ನವಾಗಿದ್ದಾರೆ ರಾಹುಲ್‌. ಅವರು ಚೆನ್ನಾಗಿ ಯೋಚನೆ ಮಾಡಬಲ್ಲರು. ಎಲ್ಲಾ ವಿಷಯಗಳನ್ನು ಚೆನ್ನಾಗಿ ಅಧ್ಯಯನ ಮಾಡಿದವರು’ ಎಂದು ಹಾಡಿ ಹೊಗಳಿದ್ದಾರೆ.

ನ್ಯೂಜೆರ್ಸಿಯಲ್ಲಿರುವ ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ರಾಹುಲ್‌ ಅವರು ಬುಧವಾರ ಮಾತನಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.