ADVERTISEMENT

ಮಂಗಳನ ಅಂಗಳದಲ್ಲಿ ದುಬೈ ನಗರ

ಪಿಟಿಐ
Published 16 ಫೆಬ್ರುವರಿ 2017, 19:30 IST
Last Updated 16 ಫೆಬ್ರುವರಿ 2017, 19:30 IST
ಮಂಗಳನ ಅಂಗಳದಲ್ಲಿ ದುಬೈ ನಗರ
ಮಂಗಳನ ಅಂಗಳದಲ್ಲಿ ದುಬೈ ನಗರ   
ದುಬೈ: ಮಂಗಳಗ್ರಹದಲ್ಲಿ 2117ರ ವೇಳೆಗೆ ಮೊದಲ ನಗರ ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಪ್ರಕಟಿಸಿದೆ.
ಮುಂದಿನ ಕೆಲವು ದಶಕಗಳಲ್ಲಿ ಕೆಂಪು ಗ್ರಹಕ್ಕೆ ಜನರನ್ನು ಕರೆದೊಯ್ಯುವ ವ್ಯವಸ್ಥೆ ಮಾಡಲು ಅದು ಉದ್ದೇಶಿಸಿದೆ.
 
ನೂರು ವರ್ಷದ ಈ ರಾಷ್ಟ್ರೀಯ ಯೋಜನೆಯನ್ನು ದೊರೆ ಶೇಖ್‌ ಮೊಹಮ್ಮದ್‌ ಬಿನ್ ರಶೀದ್‌ ಅಲ್‌ ಮಕ್ತೌಮ್‌ ಮತ್ತು ಅಬುದಾಬಿ ಯುವರಾಜ ಶೇಖ್‌ ಮೊಹಮ್ಮದ್‌ ಬಿನ್‌ ಜಾಯೆದ್‌ ಅಲ್‌ ನಹ್ಯಾನ್‌ ಪ್ರಕಟಿಸಿದರು.
 
ಇದಕ್ಕೆ ಅಂತರರಾಷ್ಟ್ರೀಯ ಪರಿಣತ  ಸಂಸ್ಥೆಗಳು ಮತ್ತು ವಿಜ್ಞಾನ ಸಂಸ್ಥೆಗಳು ಕೈಜೋಡಿಸುವ ನಿರೀಕ್ಷೆಯಿದೆ.
 
ಮುಂಬರುವ ದಶಕಗಳಲ್ಲಿ ಜನರನ್ನು ಮಂಗಳಕ್ಕೆ ರವಾನಿಸಲು ಅಗತ್ಯವಿರುವ ವೈಜ್ಞಾನಿಕ ಪ್ರಗತಿ ಸಾಧಿಸಲು ರಾಷ್ಟ್ರೀಯ ಕೇಂದ್ರಗಳ ಸ್ಥಾಪನೆಗೆ ಸಿದ್ಧತೆ ನಡೆಸುವ ಯೋಜನೆ ರೂಪಿಸಲಾಗಿದೆ. 
 
ಯುಎಇಯ ವಿಶ್ವವಿದ್ಯಾಲಯಗಳಲ್ಲಿ ಬಾಹ್ಯಾಕಾಶ ವಿಜ್ಞಾನಗಳ ವಿಷಯದ ವಿಭಾಗಗಳನ್ನು ತೆರೆಯುವುದು ಸಹ ಈ ಶತಮಾನದ ಯೋಜನೆಯ ಭಾಗವಾಗಿದೆ. ಯುವಜನರಲ್ಲಿ ಬಾಹ್ಯಾಕಾಶದ ಕುರಿತು ಒಲವು ಮೂಡಿಸುವ ಗುರಿ ಹೊಂದಲಾಗಿದೆ.
 
ಜಾಗತಿಕ ಸರ್ಕಾರಿ ಸಮಾವೇಶದಲ್ಲಿ ಈ ಘೋಷಣೆ ಮಾಡಲಾಗಿದೆ. 138 ಸರ್ಕಾರಗಳು, ಆರು ಪ್ರಮುಖ ಅಂತರರಾಷ್ಟ್ರೀಯ ಸಂಘಟನೆಗಳು, ಅಂತರರಾಷ್ಟ್ರೀಯ ತಾಂತ್ರಿಕ ಕಂಪೆನಿಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ  ಹಾಜರಿದ್ದರು ಎಂದು ‘ಗಲ್ಫ್‌ ನ್ಯೂಸ್‌’ ವರದಿ ಮಾಡಿದೆ. 
 
ಮಂಗಳದಲ್ಲಿನ ಉದ್ದೇಶಿತ ನಗರ ನಿರ್ಮಾಣದ ಪರಿಕಲ್ಪನೆಯನ್ನು ಈ ವೇಳೆ ಪ್ರಸ್ತುತಪಡಿಸಲಾಯಿತು. 
 
**
ಅನ್ಯಗ್ರಹದಲ್ಲಿ ಕಾಲಿಡುವ ಕನಸನ್ನು ನನಸಾಗಿಸುವ ಅಂತರರಾಷ್ಟ್ರೀಯ ಪ್ರಯತ್ನದ ಸಾರಥ್ಯವನ್ನು ಯುಎಇ ವಹಿಸಲಿದೆ
-ಶೇಖ್‌ ಮೊಹಮ್ಮದ್‌ ಬಿನ್‌ ರಶೀದ್‌
ದುಬೈ ದೊರೆ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.