ADVERTISEMENT

ಮಗಳಿಗಾಗಿ ಸಿಂಗಪುರದಿಂದ ಐಫೋನ್‌ 8!

ಪಿಟಿಐ
Published 23 ಸೆಪ್ಟೆಂಬರ್ 2017, 19:30 IST
Last Updated 23 ಸೆಪ್ಟೆಂಬರ್ 2017, 19:30 IST
ಅಮಿನ್‌ ಅಹ್ಮದ್‌ ಧೋಲಿಯಾ
ಅಮಿನ್‌ ಅಹ್ಮದ್‌ ಧೋಲಿಯಾ   

ಸಿಂಗಪುರ: ಭಾರತದಲ್ಲಿ ಸಿಗದ ಏನಾದರೊಂದು ಹೊಸ ಉಡುಗೊರೆಯನ್ನು ಮಗಳ ಮದುವೆಗೆ ಉಡುಗೊರೆಯಾಗಿ ನೀಡಬೇಕೆಂದುಕೊಂಡ ಭಾರತದ ಉದ್ಯಮಿಯೊಬ್ಬರಿಗೆ ಹೊಳೆದದ್ದು ಐ–ಫೋನ್‌ 8. ಅದಕ್ಕಾಗಿ ಅವರು ಸೀದಾ ಸಿಂಗಪುರಕ್ಕೆ ಹೋಗಿ ಅಲ್ಲಿ ಹರಸಾಹಸದಿಂದ ಈ ಉಡುಗೊರೆಯನ್ನು ತಂದು ಇದೀಗ ಭಾರಿ ಪ್ರಚಾರ ಪಡೆದುಕೊಂಡಿದ್ದಾರೆ.

ಇದೇ 12ರಂದು ಬಿಡುಗಡೆಯಾಗಿರುವ ಐ–ಫೋನ್‌ನ 8 ಮತ್ತು 8 ಪ್ಲಸ್‌ ಫೋನ್‌ ಇಲ್ಲಿನ ಆಚರ್ಡ್ ರಸ್ತೆಯಲ್ಲಿರುವ ‘ಆ್ಯಪಲ್‌ ಸ್ಟೋರ್’ನಲ್ಲಿ ಲಭ್ಯ ಇರುವ ಮಾಹಿತಿ ಪಡೆದು ಅಲ್ಲಿಗೆ ದೌಡಾಯಿಸಿದ್ದರು ಅಮಿನ್‌ ಅಹ್ಮದ್‌ ಧೋಲಿಯಾ. ಅಲ್ಲಿ ನೋಡಿದರೆ ಈ ಫೋನ್‌ ಖರೀದಿಸಲು ಜನರು ಮುಗಿಬಿದ್ದಿದ್ದರು. ಆದ್ದರಿಂದ ರಾತ್ರಿ–ಬೆಳಿಗ್ಗೆ ಸೇರಿ ಒಟ್ಟು 13 ಗಂಟೆ ಕ್ಯೂನಲ್ಲಿ ನಿಂತು ಎರಡು ಫೋನ್‌ ಖರೀದಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

‌‘ನಾನು ಎರಡು ಫೋನ್‌ ಖರೀದಿಸಿದೆ. ಒಂದನ್ನು ಮಗಳ ಮದುವೆಗೆ ಉಡುಗೊರೆಯಾಗಿ ನೀಡಲಿದ್ದು, ಇನ್ನೊಂದನ್ನು ಮತ್ತೊಬ್ಬಳು ಮಗಳಿಗೆ ನೀಡಲಿದ್ದೇನೆ. ನಿದ್ದೆಗೆಟ್ಟು ರಾತ್ರಿಪೂರ್ತಿ ಸರತಿಯಲ್ಲಿ ನಿಲ್ಲುವುದು ಸುಲಭ ಆಗಿರಲಿಲ್ಲ. ಆದರೂ ಮಗಳಿಗಾಗಿ ಕಷ್ಟ ಸಹಿಸಿಕೊಂಡೆ. ಇದೀಗ ನನಗಾಗುತ್ತಿರುವ ಸಂತೋಷವನ್ನು ಬರಿ ಮಾತಿನಿಂದ ಹೇಳಲಾಗುತ್ತಿಲ್ಲ’ ಎಂದು ಪತ್ರಕರ್ತರಿಗೆ ಹೇಳಿದ್ದಾರೆ.

ADVERTISEMENT

ಭಾರತದಿಂದ ಫೋನ್‌ ಖರೀದಿಗೆ ಸಿಂಗಪುರದವರೆಗೆ ಹೋದ ಮಿನ್‌ ಅಹ್ಮದ್‌ ಅಲ್ಲಿಯ ಮಾಧ್ಯಮಗಳಲ್ಲೂ ಪ್ರಚಾರ ಪಡೆದುಕೊಂಡಿದ್ದಾರೆ. ಇವರ ‘ಸಾಹಸ’ದ ಬಗ್ಗೆ ಅಲ್ಲಿಯ ‘ದಿ ಸ್ಟ್ರೈಟ್ಸ್ ಟೈಮ್ಸ್‌’ ವರದಿ ಮಾಡಿದೆ.

ಗುರುವಾರ ರಾತ್ರಿಯಿಂದಲೇ ಅಂಗಡಿ ಎದುರು ಜನ ಸೇರಿದ್ದರು. ಶುಕ್ರವಾರ ಬೆಳಿಗ್ಗೆ 8 ಗಂಟೆ ವೇಳೆ ಮಳಿಗೆ ತೆರೆಯಿತು. ಖರೀದಿಗೆ ಬಂದವರಲ್ಲಿ ಹೆಚ್ಚಿನವರು ವಿದೇಶಿಗರೇ ಆಗಿದ್ದರು. ಅವರ ಪೈಕಿ ಭಾರತದ ಧೋಲಿಯಾ ಕೂಡ ಒಬ್ಬರು. ಅವರು ಫೋನ್‌ ಖರೀದಿಸಿ ಶುಕ್ರವಾರ ರಾತ್ರಿಯೇ ಭಾರತಕ್ಕೆ ವಾ‍ಪಸಾಗಿದ್ದಾರೆ’ ಎಂದು ಪತ್ರಿಕೆಯು ವರದಿ ಮಾಡಿದೆ.

’ಈ ಎರಡು ಮಾದರಿ ಫೋನ್‌ಗಳು ಇನ್ನೂ ಅನೇಕ ದೇಶಗಳ ಮಾರುಕಟ್ಟೆಗೆ ಬಂದಿಲ್ಲ. ಆದ್ದರಿಂದ ಸಿಂಗಪುರಕ್ಕೆ ಇದರ ಖರೀದಿಗೆ ಬರುವವರ ಸಂಖ್ಯೆ ಹೆಚ್ಚಿದೆ’ ಎಂದು ಏಷ್ಯಾ ಫೆಸಿಫಿಕ್‌ ಸಂಶೋಧನಾ ಕೇಂದ್ರದ ಹಿರಿಯ ಸಂಶೋಧಕ ಕಿರಣ್‌ಜಿತ್‌ ಕೌರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.