ADVERTISEMENT

ಮುಸ್ಲಿಂ ಹೆಸರಿಟ್ಟರೆ ಪರವಾನಗಿ ರದ್ದು...!

ಪಿಟಿಐ
Published 25 ಏಪ್ರಿಲ್ 2017, 19:30 IST
Last Updated 25 ಏಪ್ರಿಲ್ 2017, 19:30 IST

ಬೀಜಿಂಗ್‌: ಮುಸಲ್ಮಾನರು ಬಹುಸಂಖ್ಯಾತರಾಗಿರುವ ಕ್ಸಿಜಿಯಾಂಗ್‌ ಪ್ರಾಂತ್ಯದಲ್ಲಿ ಇನ್ನು ಮುಂದೆ ಮಕ್ಕಳಿಗೆ ಮುಸ್ಲಿಂ ಹೆಸರಿಡುವುದನ್ನು ನಿಷೇಧಿಸಿ ಚೀನಾ ಸರ್ಕಾರ ಆದೇಶ ಹೊರಡಿಸಿದೆ.

ಮುಸಲ್ಮಾನರಲ್ಲಿ ಸಾಮಾನ್ಯವಾಗಿರುವ ‘ಇಸ್ಲಾಂ’, ‘ಕುರಾನ್‌’, ‘ಮೆಕ್ಕಾ’, ‘ಜಿಹಾದ್‌’, ‘ಇಮಾಮ್‌’, ‘ಸದ್ದಾಂ’,‘ಹಾಜಿ’, ‘ಮದೀನಾ’, ಸೇರಿದಂತೆ ಹಲವು ಹೆಸರುಗಳ ಮೇಲೆ ನಿಷೇಧ ಹೇರಿರುವ ಬಗ್ಗೆ  ‘ರೇಡಿಯೊ ಫ್ರೀ ಏಷ್ಯಾ’ ವರದಿ ಮಾಡಿದೆ.

ಈ ಆದೇಶ ಉಲ್ಲಂಘಿಸಿದರೆ ವಾಸದ ಪರವಾನಗಿ ನಿಷೇಧದ ಜತೆಗೆ ಶಿಕ್ಷಣ ಹಾಗೂ ವೈದ್ಯಕೀಯ ಸೌಲಭ್ಯ ರದ್ದುಗೊಳ್ಳಲಿದೆ ಎಂದು ಎಚ್ಚರಿಸಲಾಗಿದೆ. ಕ್ಸಿಜಿಯಾಂಗ್‌ನ ಉಯ್ಗಿರ್‌ ಪ್ರಾಂತ್ಯದಲ್ಲಿ ಒಂದು ಕೋಟಿಗೂ ಅಧಿಕ ಮುಸಲ್ಮಾನರು ಇದ್ದಾರೆ.

ADVERTISEMENT

ಈ ಪ್ರದೇಶದಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿರುವುದಾಗಿ  ಸಮರ್ಥಿಸಿಕೊಳ್ಳಲಾಗಿದೆ.
ಇದನ್ನು ಮಾನವ ಹಕ್ಕುಗಳ ಪರಿವೀಕ್ಷಣಾ ಸಂಸ್ಥೆ (ಎಚ್‌ಆರ್‌ಡಬ್ಲ್ಯೂ) ತೀವ್ರವಾಗಿ ವಿರೋಧಿಸಿದೆ. ‘ಧಾರ್ಮಿಕ ಪ್ರತಿಗಾಮಿತನ ತಡೆಯುವ ನಿಟ್ಟಿನಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ತಡೆ ಒಡ್ಡುತ್ತಿರುವ ಆದೇಶಗಳಲ್ಲಿ ಇದೂ ಒಂದು’ ಎಂದು ಸಂಸ್ಥೆ ಆರೋಪಿಸಿದೆ.

ಅತೀ ಉದ್ದದ ಗಡ್ಡ ಬೆಳೆಸುವುದನ್ನು ಹಾಗೂ ಮುಖವೂ ಸೇರಿದಂತೆ ದೇಹವನ್ನು ಪೂರ್ತಿ ಮುಚ್ಚುವ ಬಟ್ಟೆ ಧರಿಸುವುದನ್ನು ನಿಷೇಧಿಸಿ ಇದೇ ಏಪ್ರಿಲ್‌ ಒಂದರಂದು ಸರ್ಕಾರ ಆದೇಶ ಹೊರಡಿಸಿತ್ತು. ಅಷ್ಟೇ ಅಲ್ಲದೇ, ಸರ್ಕಾರಿ ಟಿ.ವಿ ವಾಹಿನಿ ವೀಕ್ಷಿಸುವುದಕ್ಕೆ ಹಾಗೂ ರೇಡಿಯೊ ಕೇಳುವುದಕ್ಕೆ ನಿರಾಕರಿಸಿದರೆ  ಶಿಕ್ಷೆ ಎದುರಿಸಬೇಕಾಗುತ್ತದೆ ಎಂದೂ ಆದೇಶದಲ್ಲಿ  ಎಚ್ಚರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.