ADVERTISEMENT

ಯಾವುದೇ ಯುದ್ಧಕ್ಕೆ ಪಾಕಿಸ್ತಾನ ಸಜ್ಜು

ರಕ್ಷಣಾ ಸಚಿವ ಆಸಿಫ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 11:04 IST
Last Updated 3 ಸೆಪ್ಟೆಂಬರ್ 2015, 11:04 IST

ಇಸ್ಲಾಮಾಬಾದ್ (ಪಿಟಿಐ): ಯಾವುದೇ ಅಲ್ಪಾವಧಿ ಅಥವಾ ದೀರ್ಘಾವಧಿಯ ಯುದ್ಧಕ್ಕೆ ಪಾಕಿಸ್ತಾನ ಸಿದ್ಧ ಎಂದಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್, ಭಾರತದ ನಾಯಕತ್ವ ಸಮರ ಸಾರಿದರೆ ತಕ್ಕ ತಿರುಗೇಟು ನೀಡುವುದಾಗಿ ತಿಳಿಸಿದ್ದಾರೆ.

ಭವಿಷ್ಯದಲ್ಲಿ ಎದುರಾಗಬಹುದಾದ ಕ್ಷಿಪ್ರ ಮತ್ತು ಕಿರು ಯುದ್ಧಗಳನ್ನು ಎದುರಿಸಲು ಭಾರತವು ಸರ್ವ ಸನ್ನದ್ಧವಾಗಿದೆ ಎಂದು ಭೂಸೇನಾ ಮುಖ್ಯಸ್ಥ ದಲ್ಬೀರ್‌ ಸಿಂಗ್‌ ಅವರು ನೀಡಿದ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ಹೀಗೆ ಪ್ರತಿಕ್ರಿಯಿಸಿದೆ.

ರೇಡಿಯೊ ಪಾಕಿಸ್ತಾನದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಆಸಿಫ್, ಯಾವುದೇ ಆಕ್ರಮಣಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದು ಸೇನೆಗೆ ತಿಳಿದಿದೆ ಎಂದಿದ್ದಾರೆ.

ADVERTISEMENT

‘ನಾವು ಶಾಂತಿ ಬಯಸುತ್ತೇವೆ. ಆದರೆ, ಒಂದು ವೇಳೆ ಭಾರತದ ನಾಯಕತ್ವ ಸಮರ ಸಾರಿದರೆ ಅದಕ್ಕೆ ತಕ್ಕ ಪ್ರತಿದಾಳಿ ನಡೆಸುತ್ತೇವೆ’ ಎಂದು ನುಡಿದಿದ್ದಾರೆ.

ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಭಾರತವು ಅಲ್ಪಾವಧಿ ಅಥವಾ ದೀರ್ಘಾವಧಿ ಸಾರಿದರೆ ಅದನ್ನು ಎದುರಿಸಲು ಪಾಕಿಸ್ತಾನವು ಸರ್ವ ಸನ್ನದ್ಧವಾಗಿದೆ’ ಎಂದಿದ್ದಾರೆ.

ಭಾರತದ ಜತೆಗಿನ ಹಳೆಯ ಯುದ್ಧಗಳ ಬಗ್ಗೆ ಪ್ರಸ್ತಾಪಿಸಿದ ಆಸಿಫ್, ‘1965ರಲ್ಲಿ ಲಾಹೋರ್ ವಶಕ್ಕೆ ಪಡೆಯುವ ಭಾರತ ಕನಸನ್ನು ನಮ್ಮ ಸೇನಾಪಡೆಗಳು ನುಚ್ಚುನೂರು ಮಾಡಿದ್ದವು. ಭವಿಷ್ಯದಲ್ಲೂ ಹಾಗೆಯೇ ಮಾಡುತ್ತೇವೆ’ ಎಂದು ಎಚ್ಚರಿಸಿದ್ದಾರೆ.

50 ವರ್ಷಗಳ ಹಿಂದಕ್ಕೆ ಹೋಲಿಸಿದರೆ, ತಮ್ಮ ಸೇನಾ ಪಡೆಗಳು ಇಂದು ತುಂಬಾ ಅನುಭವಿ ಹಾಗೂ ವೃತ್ತಿಪರವಾಗಿವೆ ಎಂದಿರುವ ರಕ್ಷಣಾ ಸಚಿವ, ‘ಹಲವು ವರ್ಷಗಳಿಂದ ನಮ್ಮ ಸೇನಾಪಡೆಗಳು ಭಯೋತ್ಫಾದನೆ ವಿರುದ್ಧದ ಸಮರದಲ್ಲಿ ತೊಡಗಿವೆ. ಯಾವುದೇ ಸವಾಲನ್ನು ಹೇಗೆ ಎದುರಿಸಬೇಕು ಎಂಬುದು ಅವುಗಳಿಗೆ ತಿಳಿದಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.