ADVERTISEMENT

ರಸ್ತೆ ಬದಿ ಸೂಪ್‌ ಸವಿದ ಒಬಾಮ

​ಪ್ರಜಾವಾಣಿ ವಾರ್ತೆ
Published 24 ಮೇ 2016, 19:30 IST
Last Updated 24 ಮೇ 2016, 19:30 IST
ಹನೋಯ್‌ನ ‘ಬನ್‌ಚಾ’ ರೆಸ್ಟೋರೆಂಟ್‌ನಲ್ಲಿ ಹಂದಿ ಮಾಂಸದ ನೂಡಲ್ ಸೂಪ್ ಮತ್ತು ಹನೋಯ್ ಬಿಯರ್ ಸವಿಯುತ್ತಿರುವ ಬರಾಕ್ ಒಬಾಮ
ಹನೋಯ್‌ನ ‘ಬನ್‌ಚಾ’ ರೆಸ್ಟೋರೆಂಟ್‌ನಲ್ಲಿ ಹಂದಿ ಮಾಂಸದ ನೂಡಲ್ ಸೂಪ್ ಮತ್ತು ಹನೋಯ್ ಬಿಯರ್ ಸವಿಯುತ್ತಿರುವ ಬರಾಕ್ ಒಬಾಮ   

ಹನೋಯ್‌ (ಎಎಫ್‌ಪಿ):  ರಸ್ತೆ ಬದಿಯ ಆ ಹೋಟೆಲ್‌ಗೆ ಹೋದ ಆ ವ್ಯಕ್ತಿ ಪ್ಲಾಸ್ಟಿಕ್‌ ಸ್ಟೂಲ್‌ ಎಳೆದು ಕುಳಿತು ಹಂದಿ ಮಾಂಸದ ನೂಡಲ್‌ ಸೂಪ್‌ಗೆ ಆರ್ಡರ್‌ ಮಾಡುತ್ತಿದ್ದಂತೆ ಹೋಟೆಲ್‌ ಮಾಲಕಿ ಮೂಕವಿಸ್ಮಿತರಾಗಿಬಿಟ್ಟರು.

ಅಕ್ಕಪಕ್ಕದಲ್ಲಿದ್ದವರಿಗೂ, ದಾರಿಹೋಕರಿಗೂ ಅಚ್ಚರಿಯೋ ಅಚ್ಚರಿ.  ಇದ್ಯಾವುದರ ಬಗ್ಗೆ ತಲೆಕೆಡಿಸಿಕೊಳ್ಳದ ಆ ‘ಗ್ರಾಹಕ’ ಮಾತ್ರ ವಿಯೆಟ್ನಾಂನಲ್ಲಿ ಹೆಸರುವಾಸಿಯಾದ ‘ಬನ್‌ ಚಾ’ ಎಂಬ ಆ ಹೋಟೆಲ್‌ನ ಹಂದಿ ನೂಡಲ್‌ ಸೂಪ್‌ ಸವಿದೇಬಿಟ್ಟರು.

ಆ ಗ್ರಾಹಕ ಯಾರು ಗೊತ್ತೇ? ವಿಯೆಟ್ನಾಂ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ.

ನಿರಂತರ ಕಾರ್ಯಕ್ರಮಗಳಲ್ಲಿ  ಬ್ಯುಸಿಯಾಗಿರುವ ಒಬಾಮ ಅವರು 45 ವರ್ಷ ಹಳೆಯ ರೆಸ್ಟೋರೆಂಟ್‌ ಸಮೀಪಿಸುತ್ತಿದ್ದಂತೆ ಕಾರು ನಿಲ್ಲಿಸಲು ಹೇಳಿ ಇಳಿದುಹೋಗಿಯೇ ಬಿಟ್ಟರು. ಅವರ ಬೆನ್ನ ಹಿಂದೆ ವಿದೇಶಿ ವಾಹಿನಿಗಳ ಕ್ಯಾಮೆರಾ, ವರದಿಗಾರರ ದಂಡು ಬೇರೆ.

‘ನಮ್ಮ ರೆಸ್ಟೋರೆಂಟ್‌ಗೆ ಬರಬಹುದು ಎಂದು ಕನಸಿನಲ್ಲೂ ಎಣಿಸದೇ ಇರುವ ಆ ವ್ಯಕ್ತಿ ಬಂದಿದ್ದನ್ನು ನಂಬಲಾಗಲಿಲ್ಲ’ ಎಂದು, ರೆಸ್ಟೋರೆಂಟ್‌ನ ಮಾಲಕಿ ಗುಯೆನ್‌ ಥೀ ಲೀನ್‌ ಸುದ್ದಿಸಂಸ್ಥೆಯೊಂದಿಗೆ ಹೇಳಿಕೊಂಡಿದ್ದಾರೆ.

ಒಬಾಮ ಅವರು ಹಂದಿ ನೂಡಲ್‌ ಸೂಪ್‌ ಜತೆ ಹನೊಯ್‌ ಬಿಯರ್ ಕೂಡಾ ಸವಿದರು ಎಂದು ಆಕೆ ವಿವರಿಸಿದ್ದಾರೆ. ಒಬಾಮ ಬಂದ ಸುದ್ದಿ ಕೇಳಿ ಹೋಟೆಲ್‌ ಬಳಿ ಅಸಂಖ್ಯಾತ ಜನ ನೆರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.