ADVERTISEMENT

ಲಂಡನ್‌ ದಾಳಿ: ಎಂಟು ಮಂದಿ ಬಂಧನ

ಪ್ರಜಾಪ್ರಭುತ್ವದ ಮೌಲ್ಯಗಳ ಮೇಲಿನ ನೀಚ ಕೃತ್ಯ: ಪ್ರಧಾನಿ ತೆರೆಸಾ ಮೇ

ಪಿಟಿಐ
Published 23 ಮಾರ್ಚ್ 2017, 19:30 IST
Last Updated 23 ಮಾರ್ಚ್ 2017, 19:30 IST
ಲಂಡನ್‌ : ಬ್ರಿಟನ್‌ನ ಸಂಸತ್‌ ಬಳಿ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಲಂಡನ್‌ ಪೊಲೀಸರು ಗುರುವಾರ ಎಂಟು ಮಂದಿಯನ್ನು ಬಂಧಿಸಿದ್ದಾರೆ. 
 
ಲಂಡನ್‌, ಬರ್ಮಿಂಗ್‌ಹ್ಯಾಂ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಕ ಕಾರ್ಯಾಚರಣೆ ನಡೆಸಿದ ಸ್ಕಾಟ್ಲೆಂಡ್‌ ಯಾರ್ಡ್‌ ಪೊಲೀಸರು ಶಂಕಿತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
 
ಸಂಸತ್‌ ಭವನದ ಬಳಿ ಬುಧವಾರ ನಡೆದ ದಾಳಿಯಲ್ಲಿ ನಾಲ್ವರು ಬಲಿಯಾಗಿದ್ದರು. ಪೊಲೀಸ್‌ ಅಧಿಕಾರಿಯನ್ನು ಇರಿದು ಸಾಯಿಸಿದ್ದ ದಾಳಿಕೋರನನ್ನು ಸ್ಕಾಟ್ಲೆಂಡ್‌ ಯಾರ್ಡ್‌ ಪೊಲೀಸರು ಗುಂಡಿಟ್ಟು ಕೊಂದಿದ್ದರು.
 
‘ಘಟನೆಯಲ್ಲಿ 40 ಮಂದಿ ಗಾಯಗೊಂಡಿದ್ದು, 29 ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಏಳು ಮಂದಿಯ ಸ್ಥಿತಿ ಗಂಭೀರವಾಗಿದೆ’  ಎಂದು ಸ್ಕಾಟ್ಲೆಂಡ್‌ ಯಾರ್ಡ್‌ ಪೊಲೀಸ್‌ನ ಹಂಗಾಮಿ ಉಪ ಕಮಿಷನರ್‌  ಮಾರ್ಕ್‌ ರೌಲಿ ಹೇಳಿದ್ದಾರೆ. 
 
ಮನೆ ಮೇಲೆ ದಾಳಿ:  ದಾಳಿಕೋರ ಖಾಲಿದ್ ಮಸೂದ್ ವಾಸಿಸುತ್ತಿದ್ದ  ಮನೆಯ ಮೇಲೆ  ವೆಸ್ಟ್‌ಮಿಡ್‌ಲ್ಯಾಂಡ್‌ ಪೊಲೀಸ್‌ ಅಧಿಕಾರಿಗಳು ಬುಧವಾರ ರಾತ್ರಿ ದಾಳಿ ನಡೆಸಿದ್ದಾರೆ. ಮನೆಯಲ್ಲಿದ್ದ ಕೆಲವರನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ದಾಳಿಗೆ ಬಳಸಿದ್ದ ಕಾರನ್ನು ಮಸೂದ್ ಬರ್ಮಿಂಗ್‌ಹ್ಯಾಂನ ಸಾಲಿಹಲ್‌ ಪ್ರದೇಶದಿಂದ ಬಾಡಿಗೆಗೆ ಪಡೆದಿದ್ದ ಎಂಬ ಅಂಶ ತನಿಖೆಯಿಂದ ತಿಳಿದುಬಂದಿದೆ. ದಾಳಿಕೋರ ಕಾರನ್ನು ಪಾದಚಾರಿಗಳ ಮೇಲೆ ವೇಗವಾಗಿ ಹರಿಸಿ ಸಂಸತ್‌ ಭವನದ ಆವರಣಕ್ಕೆ ಗುದ್ದಿಸಿದ್ದ. ಆ ಬಳಿಕ ಪೊಲೀಸ್‌ ಅಧಿಕಾರಿಯನ್ನು ಇರಿದಿದ್ದ.  
ನೀಚ ಕೃತ್ಯ– ತೆರೆಸಾ ಮೇ:  ಬ್ರಿಟನ್‌ ಪ್ರಧಾನಿ ತೆರೆಸಾ ಮೇ ಅವರು ಈ ದಾಳಿಯನ್ನು ‘ಕರಾಳ ಮತ್ತು ನೀಚ ಕೃತ್ಯ’ ಎಂದು ಖಂಡಿಸಿದ್ದು, ಪ್ರಜಾಪ್ರಭುತ್ವದ ಮೌಲ್ಯಗಳ ಮೇಲಿನ ಆಕ್ರಮಣ ಎಂದಿದ್ದಾರೆ.
 
ಡೌನಿಂಗ್‌ ಸ್ಟ್ರೀಟ್‌ನಲ್ಲಿರುವ  ನಿವಾಸದಲ್ಲಿ ಹಿರಿಯ ಅಧಿಕಾರಿಗಳ ತುರ್ತು ಸಭೆ ನಡೆಸಿದ ಅವರು, ‘ಉಗ್ರರು ಲಂಡನ್‌ನ ಹೃದಯ ಭಾಗವನ್ನೇ ಗುರಿಯಾಗಿಸಿ ದಾಳಿ ನಡೆಸಿದ್ದಾರೆ. ವಿವಿಧ ದೇಶ, ಧರ್ಮ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುವ ಜನರು ಒಟ್ಟು ಸೇರುವ ಸ್ಥಳವನ್ನೇ ಆರಿಸಿಕೊಂಡಿದ್ದಾರೆ’ ಎಂದಿದ್ದಾರೆ.
 
****
ಅಧಿವೇಶನ ಪುನರಾರಂಭ
ಬ್ರಿಟನ್‌ ಸಂಸತ್ತಿನ ಅಧಿವೇಶನ ಗುರುವಾರ ಪುನರಾರಂಭಗೊಂಡಿತು. ದಾಳಿಯಲ್ಲಿ ಮೃತಪಟ್ಟವರಿಗೆ ಗೌರವ ಸಲ್ಲಿಸಲು ಸಂಸತ್‌ ಸದಸ್ಯರು ಒಂದು ನಿಮಿಷ ಮೌನ ಆಚರಿಸಿದರು.

‘ಉಗ್ರರು ಪ್ರಜಾಪ್ರಭುತ್ವದ ಬಾಯಿ ಮುಚ್ಚಿಸಲು ಪ್ರಯತ್ನಿಸಿದ್ದಾರೆ. ನಾವು ಎದೆಗುಂದಿಲ್ಲ. ಎಂದಿನಂತೆ ಇಲ್ಲಿ ಒಟ್ಟು ಸೇರಿದ್ದೇವೆ’ ಎಂದು ಪ್ರಧಾನಿ  ಗುರುವಾರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.