ADVERTISEMENT

ಲಾಹೋರ್‌: ಪುರಾತನ ಜೈನ ಮಂದಿರ ನೆಲಸಮ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2016, 19:30 IST
Last Updated 12 ಫೆಬ್ರುವರಿ 2016, 19:30 IST

ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿದ್ದ ನೂರಾರು ವರ್ಷ ಹಳೆಯ  ಜೈನ ಮಂದಿರವನ್ನು ನ್ಯಾಯಾಲಯದ ಆದೇಶ ಉಲ್ಲಂಘಿಸಿ ನೆಲಸಮ ಮಾಡಲಾಗಿದೆ. ಈ ಮೂಲಕ ವಿವಾದಾತ್ಮಕ ಮೆಟ್ರೊ ಮಾರ್ಗಕ್ಕೆ ಸ್ಥಳ ತೆರವುಗೊಳಿಸಲಾಗಿದೆ.

ದೇವಸ್ಥಾನದ 200 ಮೀಟರ್ ವ್ಯಾಪ್ತಿಯಲ್ಲಿ ಮೆಟ್ರೊ ಮಾರ್ಗದ ಕಾಮಗಾರಿ ನಡೆಸದಂತೆ ಲಾಹೋರ್ ಹೈಕೋರ್ಟ್ ಈ ಹಿಂದೆ ನೀಡಿದ್ದ ಆದೇಶವನ್ನು ಪಂಜಾಬ್ ಸರ್ಕಾರ ಉಲ್ಲಂಘಿಸಿದೆ.

ಭಾಗಶಃ ಹಾನಿಗೊಂಡಿದ್ದ  ಪುರಾತನ ಕಟ್ಟಡದ ಉಳಿದ ಭಾಗಗಳನ್ನು  ಗುರುವಾರ ಧ್ವಂಸಗೊಳಿಸಲಾಗಿದೆ. ಭಾರತದಲ್ಲಿ 1992ರಲ್ಲಿ ಬಾಬ್ರಿ ಮಸೀದಿ ಧ್ವಂಸ ಘಟನೆ ಬಳಿಕ ಲಾಹೋರ್‌ನ ಹಳೆ ಪಟ್ಟಣದ ಅನಾರ್ಕಲಿ  ಬಜಾರ್‌ನಲ್ಲಿದ್ದ ಜೈನ ಮಂದಿರವನ್ನು ಜನರ ಗುಂಪೊಂದು ಹಾನಿಗೊಳಿಸಿತ್ತು.  ಬಳಿಕ ಈ ಕಟ್ಟಡವು ಅಂಗಡಿ, ಕಚೇರಿ ಮೊದಲಾದ ವಾಣಿಜ್ಯ ಉದ್ದೇಶಗಳಿಗೆ ಬಳಕೆಯಾಗುತ್ತಿತ್ತು.

ಮೆಟ್ರೊ ಮಾರ್ಗ ಯೋಜನೆಗಾಗಿ ಲಾಹೋರ್‌ನ ಸುಪ್ರೀಂ ಕೋರ್ಟ್ ನೊಂದಣಿ ಶಾಖೆ, ಶಾಲಿಮಾರ್ ಉದ್ಯಾನ, ಚೌಬರ್ಜಿ ಸ್ಮಾರಕ, ಸೇಂಟ್ ಆಂಡ್ರ್ಯೂಸ್ ಚರ್ಚ್, ಜಿಪಿಒ ಕಟ್ಟಡ, ಮೆಹ್ರುನ್ನಿಸಾ ಸಮಾಧಿ, ಬಾಬಾ ಮೌಜ್ ದರಿಯಾ, ಶಾ ಚೆರಾಗ್ ಕಟ್ಟಡ ಮೊದಲಾದ ಐತಿಹಾಸಿಕ ಸ್ಮಾರಕಗಳು ಧರೆಗುರುಳಿವೆ.
ಐತಿಹಾಸಿಕ ಕಟ್ಟಡಗಳ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೆ ಕಾಮಗಾರಿಗಳನ್ನು  ನಡೆಸದಂತೆ  ಜನವರಿಯಲ್ಲಿ ಲಾಹೋರ್ ಹೈಕೋರ್ಟ್ ತಡೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.