ADVERTISEMENT

ವನ್ನಾಕ್ರೈ ಕುತಂತ್ರಾಂಶಕ್ಕೆ ಉ. ಕೊರಿಯಾ ನಂಟು?

ಪಿಟಿಐ
Published 23 ಮೇ 2017, 19:30 IST
Last Updated 23 ಮೇ 2017, 19:30 IST

ಸ್ಯಾನ್ ಫ್ರಾನ್ಸಿಸ್ಕೊ : ವಿಶ್ವದಾದ್ಯಂತ ಕಂಪ್ಯೂಟರ್ ಬಳಕೆದಾರರಿಗೆ ತಲೆನೋವು ಉಂಟುಮಾಡಿದ್ದ ವನ್ನಾಕ್ರೈ ಕುತಂತ್ರಾಂಶವನ್ನು ಉತ್ತರ ಕೊರಿಯಾದ ನಂಟು ಹೊಂದಿರುವ ದಿ ಲಾಜರಸ್ ಹ್ಯಾಕಿಂಗ್ ಗುಂಪು ಹರಿಬಿಟ್ಟಿರುವ ಸಾಧ್ಯತೆ ದಟ್ಟವಾಗಿದೆ ಎಂದು ಅಮೆರಿಕದ ಆ್ಯಂಟಿ ವೈರಸ್ ತಂತ್ರಾಂಶ ಅಭಿವೃದ್ಧಿ ಸಂಸ್ಥೆ ಸೈಮ್ಯಾಂಟೆಕ್ ಹೇಳಿದೆ.

ಆದರೆ ಉತ್ತರ ಕೊರಿಯಾ ಇದನ್ನು ಅಲ್ಲಗಳೆದಿದೆ. ನೇರವಾಗಿ ಉತ್ತರ ಕೊರಿಯಾದ ನಂಟಿನ ಪ್ರಸ್ರಾವ ಮಾಡದೆ, ಈ ಹಿಂದೆ ಲಾಜರಸ್ ಗುಂಪು ನಡೆಸಿದ ಕೆಲವು ಕುತಂತ್ರಾಂಶ ದಾಳಿಗಳಲ್ಲಿ ಇರುವಂಥದ್ದೇ ಲಕ್ಷಣಗಳು ವನ್ನಾಕ್ರೈನ ಪ್ರಾರಂಭಿಕ ಆವೃತ್ತಿಗಳಲ್ಲಿಯೂ ಇದ್ದವು ಎಂದು ಸೈಮ್ಯಾಂಟೆಕ್ ಹೇಳಿದೆ.

ಲಾಜರಸ್ ಗುಂಪು ಬಳಸುವ ಸಂಕೇತಗಳು ಮತ್ತು ವನ್ನಾಕ್ರೈನಲ್ಲಿರುವ ಸಂಕೇತಗಳ ನಡುವೆ ಹೋಲಿಕೆ ಇರುವುದನ್ನು ಗುರುತಿಸಿರುವ ಗೂಗಲ್ ಸಂಶೋಧಕ ನೀಲ್ ಮೆಹ್ತಾ ಕೂಡ ಈ ದಾಳಿಗೆ ಉತ್ತರ ಕೊರಿಯಾದ ನಂಟಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ದೊಡ್ಡ ಮೊತ್ತದ ವಿದೇಶಿ ಕರೆನ್ಸಿ ಸಂಗ್ರಹಿಸುವ ಉದ್ದೇಶದಿಂದ ಉತ್ತರ ಕೊರಿಯಾ  ಈಚಿನ ವರ್ಷಗಳಲ್ಲಿ ಹೆಚ್ಚಾಗಿ ಇಂತಹ ಕುತಂತ್ರಾಂಶ ದಾಳಿ ನಡೆಸುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.