ADVERTISEMENT

ಶ್ರೀಲಂಕಾ, ಮಾಲ್ಡೀವ್ಸ್‌ಗೆ ಅತುಲ್‌ ಕಶ್ಯಪ್‌ ರಾಯಭಾರಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2015, 19:30 IST
Last Updated 27 ಮಾರ್ಚ್ 2015, 19:30 IST

ವಾಷಿಂಗ್ಟನ್‌ (ಪಿಟಿಐ): ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಅವರು ಭಾರತ ಮೂಲದ ರಾಜತಂತ್ರಜ್ಞ ಅತುಲ್‌ ಕಶ್ಯಪ್‌ ಅವರನ್ನು ಶ್ರೀಲಂಕಾ ಮತ್ತು ಮಾಲ್ಡೀವ್ಸ್‌ ರಾಯಭಾರಿಯಾಗಿ ನೇಮಿಸಿದ್ದಾರೆ. ಅಲ್ಲದೆ, ಅಲೈನಾ ಟೆಪ್ಲಿಟ್ಜ್‌ ಅವರನ್ನು ನೇಪಾಳಕ್ಕೆ ಅಮೆರಿಕ ರಾಯಭಾರಿಯಾಗಿ ಒಬಾಮ ನೇಮಕ ಮಾಡಿದ್ದಾರೆ.

ಕಶ್ಯಪ್‌ ಈ ಹಿಂದೆ ನವದೆಹಲಿ­ಯಲ್ಲಿನ ಅಮೆರಿಕ ರಾಯಭಾರ ಕಚೇರಿ­ಯಲ್ಲಿ ಅಧಿಕಾರಿಯಾಗಿದ್ದರು. ಪ್ರಸ್ತುತ ಅವರು ಅಮೆರಿಕ ವಿದೇಶಾಂಗ ಇಲಾಖೆಯ ದಕ್ಷಿಣ ಮತ್ತು ಕೇಂದ್ರ ಏಷ್ಯಾ ವ್ಯವಹಾರಗಳ ವಿಭಾಗದ ಉಪ ಸಹಾಯಕ ಕಾರ್ಯದರ್ಶಿ ಆಗಿದ್ದಾರೆ.
ಈಗಿನ ಹೊಸ ಜವಾಬ್ದಾರಿಯೊಂದಿಗೆ ಕಶ್ಯಪ್‌, ಅಮೆರಿಕ ವಿದೇಶಾಂಗ ಇಲಾಖೆ ಸಹಾಯಕ ಕಾರ್ಯದರ್ಶಿ ನಿಶಾ ದೇಸಾಯಿ ಬಿಸ್ವಾಲ್‌ ಅವರ ಜೊತೆಗೂಡಿ ಭಾರತ, ನೇಪಾಳ, ಶ್ರೀಲಂಕಾ, ಮಾಲ್ಡೀವ್ಸ್,  ಬಾಂಗ್ಲಾದೇಶ ಹಾಗೂ  ಭೂತಾನ್‌ಗೆ ಸಂಬಂಧಿಸಿದ ಅಮೆರಿಕ ನೀತಿಯಲ್ಲಿ ಅನೋನ್ಯ ಬಾಂಧವ್ಯ ಕಲ್ಪಿಸಲು ಸಹಕರಿಸಿ ಕೆಲಸ ಮಾಡಿದ್ದರು.

ಕಶ್ಯಪ್‌,  2010ರಿಂದ 2012ರವರೆಗೆ ಅಮೆರಿಕ ವಿದೇಶಾಂಗ ಇಲಾಖೆ  ದಕ್ಷಿಣ ಮತ್ತು ಕೇಂದ್ರ ಏಷ್ಯಾ ವಿಭಾಗದಲ್ಲಿ ಭಾರತ, ನೇಪಾಳ, ಶ್ರೀಲಂಕಾ, ಭೂತಾನ್‌ ಬಾಂಗ್ಲಾದೇಶ ಹಾಗೂ ಮಾಲ್ಡೀವ್ಸ್‌ ವ್ಯವಹಾರಗಳ ನಿರ್ದೇಶಕರಾಗಿದ್ದರು. 2012ರಿಂದ 2013ರವರೆಗೆ ಅವರು ಅಮೆರಿಕದ ಪೂರ್ವ ಏಷ್ಯಾ ಮತ್ತು ಪೆಸಿಫಿಕ್‌ ವ್ಯವಹಾರಗಳ ವಿಭಾಗದಲ್ಲಿ ಏಷ್ಯಾ ಪೆಸಿಫಿಕ್‌ ಆರ್ಥಿಕ ಸಹಕಾರದ ಹಿರಿಯ ಅಧಿಕಾರಿಯಾಗಿದ್ದರು.

ಇದಕ್ಕೂ ಮುನ್ನ ಕಶ್ಯಪ್‌, 2008­ರಿಂದ 2010ರವರೆಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದಲ್ಲಿ ಅಂತರ­ರಾಷ್ಟ್ರೀಯ ವ್ಯವಹಾರಗಳ ನಿರ್ದೇಶಕ­ರಾಗಿ­ದ್ದರು.  2005ರಿಂದ 2008ರವರೆಗೆ ಅವರು ನವದೆಹಲಿಯ ಅಮೆರಿಕ ರಾಯಭಾರ ಕಚೇರಿಯಲ್ಲಿ ಉಪ ರಾಜಕೀಯ ಸಲಹೆಗಾರರಾಗಿದ್ದರು.

ಅವರು 2003ರಿಂದ 2004ರವರೆಗೆ ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಪೂರ್ವ ಮತ್ತು ಉತ್ತರ ವ್ಯವಹಾರಗಳ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.  2002ರಿಂದ 2003ರ ವರೆಗೆ ವಿದೇಶಾಂಗ ಇಲಾಖೆಯ ರಾಜಕೀಯ ವ್ಯವಹಾರಗಳ ಅಧೀನ ಕಾರ್ಯದರ್ಶಿಗಳ ವಿಶೇಷ ಸಹಾಯಕ ಅಧಿಕಾರಿಯಾಗಿದ್ದರು.

ವರ್ಜೀನಿಯಾ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರುವ ಕಶ್ಯಪ್‌, ಅರ್ಥಶಾಸ್ತ್ರ, ಅಂತರರಾಷ್ಟ್ರೀಯ ಸಂಬಂಧ, ಧಾರ್ಮಿಕ ಹಾಗೂ ರಾಜತಾಂತ್ರಿಕತೆ ವಿಷಯಗಳ ಜೊತೆ ಫ್ರೆಂಚ್‌ ಭಾಷೆಯನ್ನೂ ಅಧ್ಯಯನ ಮಾಡಿದ್ದಾರೆ. ಫ್ರೆಂಚ್‌ನಲ್ಲಿ ಪ್ರಾವಿಣ್ಯತೆ ಜೊತೆಗೆ ಹಿಂದಿ ಮತ್ತು ಕೆಲವು ವಿಯೆಟ್ನಾಂ ಭಾಷೆಗಳಲ್ಲಿ ಭಾಷಾಂತರಕಾರರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.