ADVERTISEMENT

ಷರೀಫ್‌, ಮಕ್ಕಳ ವಿರುದ್ಧ ನಾಲ್ಕು ಮೊಕದ್ದಮೆ ದಾಖಲು

ಪಿಟಿಐ
Published 29 ಆಗಸ್ಟ್ 2017, 19:30 IST
Last Updated 29 ಆಗಸ್ಟ್ 2017, 19:30 IST
ಷರೀಫ್‌, ಮಕ್ಕಳ ವಿರುದ್ಧ ನಾಲ್ಕು ಮೊಕದ್ದಮೆ ದಾಖಲು
ಷರೀಫ್‌, ಮಕ್ಕಳ ವಿರುದ್ಧ ನಾಲ್ಕು ಮೊಕದ್ದಮೆ ದಾಖಲು   

ಇಸ್ಲಾಮಾಬಾದ್‌: ಪಾಕಿಸ್ತಾನದ ಉಚ್ಚಾಟಿತ ಪ್ರಧಾನಿ ನವಾಜ್‌ ಷರೀಫ್‌, ಅವರ ಮಕ್ಕಳು ಮತ್ತು ಹಣಕಾಸು ಸಚಿವ ಇಶಾಕ್‌ ದರ್‌ ಅವರ ವಿರುದ್ಧ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ನಾಲ್ಕು ಮೊಕದ್ದಮೆಗಳನ್ನು ದಾಖಲು ಮಾಡಲು ಪಾಕಿಸ್ತಾನದ ಭ್ರಷ್ಟಾಚಾರ ವಿರೋಧಿ ಕಣ್ಗಾವಲು ಸಂಸ್ಥೆ ಕಾರ್ಯಪ್ರವೃತ್ತವಾಗಿದೆ.

ಪನಾಮಾ ಪೇಪರ್ಸ್‌ ಪ್ರಕರಣದಲ್ಲಿ ನವಾಜ್‌ ಷರೀಫ್‌ ದೋಷಿ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡುವ ಸಮಯದಲ್ಲಿ ನಿರ್ದೇಶಿಸಿದಂತೆ, ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಹೊಣೆಗಾರಿಕಾ ಸಂಸ್ಥೆಯ ಅಧ್ಯಕ್ಷ ಖಮರ್‌ ಜಮನ್‌ ಚೌಧರಿ ತಿಳಿಸಿದ್ದಾರೆ. ‘ಕೋರ್ಟ್‌ ನಮಗೆ ಆರು ವಾರಗಳ ಗಡುವು ನೀಡಿದೆ. ಅದು ಬರುವ ಸೆಪ್ಟೆಂಬರ್‌ 11ಕ್ಕೆ ಮುಕ್ತಾಯ ಆಗಲಿದೆ. ಆದ್ದರಿಂದ ಸೆಪ್ಟೆಂಬರ್‌ ಎರಡನೆಯ ವಾರದ ಒಳಗೇ ಷರೀಫ್‌, ಅವರ ಮಕ್ಕಳಾದ ಹುಸೇನ್‌, ಹಸನ್‌, ಮರಿಯಮ್‌ ಹಾಗೂ ಸಚಿವ ದರ್‌ ವಿರುದ್ಧ, ಮೊಕದ್ದಮೆ ದಾಖಲು ಮಾಡಲಾಗುತ್ತಿದೆ. ಇದರ ತನಿಖೆಯನ್ನು ಜಂಟಿ ತನಿಖಾ ದಳವು ನಡೆಸಲಿದೆ’ ಎಂದು ಅವರು ಹೇಳಿದ್ದಾರೆ.

‘ಸುಪ್ರೀಂಕೋರ್ಟ್‌ ತೀರ್ಪು ನೀಡಿದ ಮೇಲೆ ಈಗಾಗಲೇ ತನಿಖಾ ದಳವು ಷರೀಫ್‌ ಅವರಿಗೆ ಮೂರು ಬಾರಿ ನೋಟಿಸ್‌ ಜಾರಿ ಮಾಡಿದೆ. ಆದರೆ ಇದುವರೆಗೂ ಅವರು ತನಿಖಾ ದಳದ ಮುಂದೆ ಹಾಜರು ಆಗಲಿಲ್ಲ. ಆದ್ದರಿಂದ ಅವರಿಗೆ ಈಗ ಸಮನ್ಸ್‌ ಜಾರಿ ಮಾಡಲಾಗುವುದು’ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.