ADVERTISEMENT

ಸರಕು ಸಾಗಣೆ ವಿಮಾನ ಪತನ

ನಿದ್ರೆಯಲ್ಲಿ ಚಿರನಿದ್ರೆಗೆ ಜಾರಿದ 37ಗ್ರಾಮಸ್ಥರು, 40ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ಏಜೆನ್ಸೀಸ್
Published 16 ಜನವರಿ 2017, 19:30 IST
Last Updated 16 ಜನವರಿ 2017, 19:30 IST
ಮನೆ ಮೇಲೆ ಬಿದ್ದಿರುವ ವಿಮಾನದ ಭಾಗ --–ರಾಯಿಟರ್ಸ್‌ ಚಿತ್ರ
ಮನೆ ಮೇಲೆ ಬಿದ್ದಿರುವ ವಿಮಾನದ ಭಾಗ --–ರಾಯಿಟರ್ಸ್‌ ಚಿತ್ರ   

ಬಿಷ್‌ಕೆಕ್‌: ಕಿರ್ಗಿಸ್ತಾನದ ಪ್ರಮುಖ ವಿಮಾನ ನಿಲ್ದಾಣದ ಸಮೀಪದ ಗ್ರಾಮವೊಂದರ ಮೇಲೆ ಸೋಮವಾರ ಬೆಳಿಗ್ಗೆ 7.30ರ ಸುಮಾರಿಗೆ ಟರ್ಕಿ ಏರ್‌ಲೈನ್ಸ್‌ಗೆ ಸೇರಿದ ಸರಕು ಸಾಗಣೆ ವಿಮಾನವೊಂದು ಪತನಗೊಂಡಿದ್ದು, 37 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ನಿಲ್ದಾಣದ ಸಮೀಪದಡ್ಯಾಚಾ–ಸೂ ಗ್ರಾಮದವರೇ ದುರ್ಘಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದಾರೆ. ಅಲ್ಲದೇ ಅನೇಕ ಮನೆಗಳಿಗೆ ಹಾನಿಯಾಗಿದೆ ಎಂದು ಕಿರ್ಗಿಸ್ತಾನ ಸರ್ಕಾರದ ತುರ್ತುಸೇವೆಗಳ ವಕ್ತಾರ ಮಹಮ್ಮದ್‌ ಸ್ವಾರೋವ್‌ ಹೇಳಿದ್ದಾರೆ.

ದುರ್ಘಟನೆಯ ನಂತರ ಗ್ರಾಮದ ತುಂಬಾ ದಟ್ಟ ಹೊಗೆ ಆವರಿಸಿತ್ತು. ಗ್ರಾಮದಲ್ಲಿ ಅಲ್ಲಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯನ್ನು ಪರಿಹಾರ ಕಾರ್ಯಚರಣೆ ತಂಡಗಳು ನಂದಿಸಿವೆ.

‘ಗ್ರಾಮಸ್ಥರು ಮಲಗಿದ್ದ ಸಮಯದಲ್ಲಿ ಈ ವಿಮಾನ ಮನೆಗಳ ಮೇಲೆ ಪತನಗೊಂಡಿದೆ. ಘಟನೆಯಲ್ಲಿ ನನ್ನ ಸಹೋದರಿಯ ಮನೆಗೆ ಹಾನಿಯಾಗಿದೆ. ಅದೃಷ್ಟವಶಾತ್‌ ಅವರ ಕುಟುಂಬದವರು ಅಪಾಯದಿಂದ ಪಾರಾಗಿದ್ದಾರೆ’ ಎಂದು ಗ್ರಾಮಸ್ಥ ಝಮ್ರಿಯಾತ್‌ ರೆಝಾಖ್ನೋವ್‌ ತಿಳಿಸಿದ್ದಾರೆ.

ಕಿರ್ಗಿಸ್ತಾನದ ರಾಜಧಾನಿ ಬಿಷ್‌ಕೆಕ್‌ ಮಾರ್ಗವಾಗಿ ಹಾಂಕಾಂಗ್‌ನಿಂದ ಇಸ್ತಾಂಬುಲ್‌ಗೆ ತೆರಳುತ್ತಿದ್ದ ಸರಕು ಸಾಗಣೆ ವಿಮಾನದಲ್ಲಿ ನಾಲ್ವರು ಪೈಲಟ್‌ಗಳಿದ್ದರು. ಘಟನೆಯಲ್ಲಿ 43 ಮನೆಗಳಿಗೆ ಹಾನಿಯಾಗಿದೆ ಎಂದು ತುರ್ತುಸೇವೆಗಳ ಸಚಿವಾಲಯ ತಿಳಿಸಿದೆ.

ವಿಮಾನ ಮನೆಗಳ ಮೇಲೆಯೇ ಪತನಗೊಂಡಿದ್ದರಿಂದ ಅನೇಕ ಕುಟುಂಬಗಳು  ನಿರ್ನಾಮವಾಗಿವೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಲು ಪ್ರಧಾನಿ ಸೂರ್ನೊಬೈ ಜಿನ್‌ಬೆಕೊವ್‌ ಅವರು ಆಯೋಗ ರಚನೆ ಮಾಡಿದ್ದಾರೆ. ಕಿರ್ಗಿಸ್ತಾನ ಅಧ್ಯಕ್ಷ ಅಲ್ಮಾಝಬೆಕ್‌ ಅ್ಯಂಟಬ್‌ಯೆವ್‌ ಅವರು ಚೀನಾ ಪ್ರವಾಸವನ್ನು ರದ್ದುಗೊಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.