ADVERTISEMENT

ಸಾಕ್ಷ್ಯ ಒದಗಿಸದಿದ್ದಲ್ಲಿ ಸಯೀದ್‌ ಬಿಡುಗಡೆ: ಕೋರ್ಟ್‌

ಪಿಟಿಐ
Published 11 ಅಕ್ಟೋಬರ್ 2017, 19:30 IST
Last Updated 11 ಅಕ್ಟೋಬರ್ 2017, 19:30 IST
ಹಫೀಸ್‌ ಸಯೀದ್‌
ಹಫೀಸ್‌ ಸಯೀದ್‌   

ಲಾಹೋರ್‌: ಜಮಾತ್‌ ಉದ್ ದವಾ ಮುಖ್ಯಸ್ಥ ಹಾಗೂ ಮುಂಬೈ ದಾಳಿಯ ಸಂಚುಕೋರ ಹಫೀಜ್‌ ಸಯೀದ್‌ ವಿರುದ್ಧ ಪಾಕಿಸ್ತಾನದ ಸರ್ಕಾರ ಯಾವುದೇ  ಸಾಕ್ಷ್ಯಾಧಾರಗಳನ್ನು ಒದಗಿಸದಿದ್ದರೆ, ಆತನ ಗೃಹಬಂಧನ ಆದೇಶವನ್ನು ರದ್ದು ಮಾಡಲಾಗುವುದು ಎಂದು ಲಾಹೋರ್‌ ಹೈಕೋರ್ಟ್‌ ಎಚ್ಚರಿಕೆ ನೀಡಿದೆ. ಹಫೀಜ್‌ ಕಳೆದ ಜನವರಿ 31ರಿಂದ ಗೃಹ ಬಂಧನದಲ್ಲಿದ್ದಾನೆ.

ತನ್ನ ಬಂಧನವನ್ನು ಪ್ರಶ್ನಿಸಿ ಲಾಹೋರ್ ಹೈಕೋರ್ಟ್‌ಗೆ ಆತ ಅರ್ಜಿ ಸಲ್ಲಿಸಿದ್ದಾನೆ. ತನ್ನ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದಿದ್ದರೂ ಬಂಧನದಲ್ಲಿ ಇಡಲಾಗಿದೆ ಎಂಬುದು ಆತನ ವಾದ. ಆದ್ದರಿಂದ ಕಳೆದ ಬಾರಿ ಈ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಆತನ ವಿರುದ್ಧ ಸಾಕ್ಷ್ಯಾಧಾರ ಸಲ್ಲಿಸುವಂತೆ ಪಾಕಿಸ್ತಾನ ಸರ್ಕಾರಕ್ಕೆ ಸೂಚಿಸಿತ್ತು. ಕೋರ್ಟ್‌ ಆದೇಶದಂತೆ ಆಂತರಿಕ ಸಚಿವಾಲಯದ ಕಾರ್ಯದರ್ಶಿಯವರು ಕೋರ್ಟ್‌ಗೆ ಹಾಜರಾಗಿ ಸೂಕ್ತ ದಾಖಲೆಗಳನ್ನು ಒದಗಿಸಬೇಕಿತ್ತು. ಆದರೆ ಇದುವರೆಗೆ ಅವರು ಹಾಜರು ಆಗಿಲಿಲ್ಲ. ಇದರಿಂದ ನ್ಯಾಯಮೂರ್ತಿ ಸಯೀದ್‌ ಮಜಹರ್‌ ಅಲಿ ಅಕ್ಬರ್‌ ನಖ್ವಿ ಗರಂ ಆದರು.

‘ಯಾವುದೇ ವ್ಯಕ್ತಿಯನ್ನು ಮಾಧ್ಯಮಗಳು ನೀಡಿರುವ ವಿಡಿಯೊ ತುಣುಕಿನ ಆಧಾರದ ಮೇಲೆ ಗೃಹ ಬಂಧನದಲ್ಲಿ ಹೆಚ್ಚು ದಿನ ಇರಿಸಲು ಸಾಧ್ಯವಿಲ್ಲ. ಸರ್ಕಾರದ ಬೇಜವಾಬ್ದಾರಿಯ ವರ್ತನೆ ನೋಡಿದರೆ ಆರೋಪಿಯ ವಿರುದ್ಧ ಅದರ ಬಳಿ ಯಾವುದೇ ದಾಖಲೆಗಳು ಇಲ್ಲ ಎಂದೆನಿಸುತ್ತಿದೆ. ಆರೋಪಿಯ ಪರ ವಕೀಲರು ಕೂಡ ಮೇಲಿಂದ ಮೇಲೆ ಸಾಕ್ಷ್ಯಾಧಾರಗಳು ಇಲ್ಲ ಎಂದೇ ವಾದಿಸುತ್ತಾ ಬಂದಿದ್ದಾರೆ. ಆದ್ದರಿಂದ ಆರೋಪಿಯ ಬಿಡುಗಡೆಗೆ ಆದೇಶ ಹೊರಡಿಸದೇ ಬೇರೆ ದಾರಿ ಇಲ್ಲ’ ಎಂದರು.

ADVERTISEMENT

ಆಗ ಕೋರ್ಟ್‌ನಲ್ಲಿ ಹಾಜರು ಇದ್ದ ಸಚಿವಾಲಯದ ಇನ್ನೊಬ್ಬ ಅಧಿಕಾರಿ, ‘ಕಾರ್ಯದರ್ಶಿಯವರಿಗೆ ಅತೀವ ತುರ್ತಾದ ಕೆಲಸ ಕಾರ್ಯಗಳಿದ್ದು ಕೋರ್ಟ್‌ಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದರು. ಇದರಿಂದ ಸಿಟ್ಟುಗೊಂಡ ನ್ಯಾಯಮೂರ್ತಿಗಳು ‘ಸರ್ಕಾರದ ಪ್ರತಿಯೊಬ್ಬ ಪ್ರತಿನಿಧಿಯನ್ನು ನೋಡಿಕೊಳ್ಳಲು ಸೇನಾಪಡೆಯ ಒಬ್ಬ ಅಧಿಕಾರಿಯನ್ನು ನಿಯೋಜಿಸಲಾಗುತ್ತದೆ. ಆದರೆ ಕೋರ್ಟ್‌ ಅನ್ನು ಪ್ರತಿನಿಧಿಸಲು ಮಾತ್ರ ಒಬ್ಬರೇ ಒಬ್ಬ ಅಧಿಕಾರಿ ಇಲ್ಲದೇ ಇರುವುದು ಬಹಳ ವಿಚಿತ್ರ ಎನಿಸುತ್ತದೆ’ ಎಂದರು. ವಿಚಾರಣೆಯನ್ನು ಇದೇ 13 ಕ್ಕೆ ಮುಂದೂಡಿರುವ ಕೋರ್ಟ್‌ ಸಾಕ್ಷ್ಯಾಧಾರ ಒದಗಿಸಲು ಇನ್ನೊಂದು ಅವಕಾಶ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.