ADVERTISEMENT

ಸಿರಿಯಾದಲ್ಲಿ ದಾಳಿ: ಅಮೆರಿಕಕ್ಕೆ ರಷ್ಯಾ ಎಚ್ಚರಿಕೆ

ಏಜೆನ್ಸೀಸ್
Published 8 ಏಪ್ರಿಲ್ 2017, 11:00 IST
Last Updated 8 ಏಪ್ರಿಲ್ 2017, 11:00 IST
ಸಿರಿಯಾ ವಿರುದ್ಧದ ದಾಳಿ ಖಂಡಿಸಿ ಬೊಲಿವಿಯಾದಲ್ಲಿ ಅಮೆರಿಕ ರಾಯಭಾರ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು
ಸಿರಿಯಾ ವಿರುದ್ಧದ ದಾಳಿ ಖಂಡಿಸಿ ಬೊಲಿವಿಯಾದಲ್ಲಿ ಅಮೆರಿಕ ರಾಯಭಾರ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು   

ವಿಶ್ವಸಂಸ್ಥೆ/ಮಾಸ್ಕೊ: ಸಿರಿಯಾದ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದಕ್ಕೆ ಗಂಭೀರ ಪರಿಣಾಮಗಳನ್ನೆದುರಿಸಬೇಕಾದೀತು ಎಂದು ಅಮೆರಿಕಕ್ಕೆ ರಷ್ಯಾ ಎಚ್ಚರಿಕೆ ನೀಡಿದೆ. ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷರಾದ ಬಳಿಕ ಅಮೆರಿಕ ಮತ್ತು ರಷ್ಯಾದ ಮಧ್ಯೆ ಮೊದಲ ಬಾರಿ ಸಂಘರ್ಷ ತಲೆದೋರಿದೆ.

‘ಅಮೆರಿಕ ಕೈಗೊಂಡ ನ್ಯಾಯಸಮ್ಮತವಲ್ಲದ ಕ್ರಮವನ್ನು ನಾವು ಖಂಡಿಸುತ್ತೇವೆ. ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಸ್ಥಿರತೆ ವಿಷಯದಲ್ಲಿ ಇದರ ಪರಿಣಾಮಗಳು ಗಂಭೀರವಾಗಿರಲಿವೆ’ ಎಂದು ವಿಶ್ವಸಂಸ್ಥೆಯಲ್ಲಿನ ರಷ್ಯಾದ ಉಪ ರಾಯಭಾರಿ ವ್ಲಾಡಿಮಿರ್ ಸಾಫ್ರೊನ್‌ಕೊವ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ತಿಳಿಸಿದ್ದಾರೆ.

ಮೆಡಿಟರೇನಿಯನ್ ಸಮುದ್ರದಿಂದ ವಿಮಾನವಾಹಕ ನೌಕೆಗಳ ಮೂಲಕ ಅಮೆರಿಕ 60ಕ್ಕೂ ಹೆಚ್ಚು ಟೊಮಹಾಕ್‌ ಕ್ಷಿಪಣಿಗಳನ್ನು ಸಿರಿಯಾದ ವಾಯುನೆಲೆ ಮೇಲೆ ಶುಕ್ರವಾರ ಡಾವಣೆ ಮಾಡಿತ್ತು. ಸಿರಿಯಾದ ಆರು ವರ್ಷ ಹಳೆಯ ನಾಗರಿಕ ಯುದ್ಧದಲ್ಲಿ ನೇರ ಮಧ್ಯಪ್ರವೇಶಿಸಲು ಮುಂದಾಗಿದ್ದು ಟ್ರಂಪ್ ಅಧಿಕಾರ ಸ್ವೀಕರಿಸಿದ ಬಳಿಕ ಕೈಗೊಂಡ ಮೊದಲ ಮಹತ್ವದ ನಿರ್ಧಾರವಾಗಿದೆ. ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಅವರು ನಾಗರಿಕ ಯುದ್ಧದಲ್ಲಿ ನೇರ ಮಧ್ಯಪ್ರವಶಿಸಲು ಮುಂದಾಗಿರಲಿಲ್ಲ.

ADVERTISEMENT

ಸಿರಿಯಾ ಸರ್ಕಾರದ ಪಡೆಗಳು ಬಂಡುಕೋರಪೀಡಿತ ಪ್ರದೇಶದ ಮೇಲೆ ರಾಸಾಯನಿಕ ದಾಳಿ ನಡೆಸಿದ್ದು, 70 ಮಂದಿ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಇದಕ್ಕೆ ಪ್ರತಿಯಾಗಿ ಅಮೆರಿಕ ದಾಳಿ ನಡೆಸಿತ್ತು. ಆದರೆ, ರಾಸಾಯನಿಕ ದಾಳಿ ಆರೋಪವನ್ನು ಸಿರಿಯಾ ನಿರಾಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.