ADVERTISEMENT

ಸ್ಕಾಟ್ಲೆಂಡ್‌ನಲ್ಲಿ ಅತಿ ಎತ್ತರದ ‘ತೇಲುವ ಪವನ ವಿದ್ಯುತ್ ಯಂತ್ರ’

ಪಿಟಿಐ
Published 24 ಜುಲೈ 2017, 19:30 IST
Last Updated 24 ಜುಲೈ 2017, 19:30 IST
ಸ್ಕಾಟ್ಲೆಂಡ್‌ನಲ್ಲಿ ಅತಿ ಎತ್ತರದ ‘ತೇಲುವ ಪವನ ವಿದ್ಯುತ್ ಯಂತ್ರ’
ಸ್ಕಾಟ್ಲೆಂಡ್‌ನಲ್ಲಿ ಅತಿ ಎತ್ತರದ ‘ತೇಲುವ ಪವನ ವಿದ್ಯುತ್ ಯಂತ್ರ’   

ಲಂಡನ್: ಬ್ರಿಟನ್‌ನ ಬಿಗ್ ಬೆನ್‌ ಗೋಪುರಕ್ಕಿಂತ ಎತ್ತರದ ಟರ್ಬೈನ್‌ಗಳಿರುವ, ವಿಶ್ವದ ಮೊದಲ ಪೂರ್ಣ ಪ್ರಮಾಣದ, ನೀರಿನಲ್ಲಿ ತೇಲುವ ಪವನ ವಿದ್ಯುತ್ ಯಂತ್ರವನ್ನು ಸ್ಕಾಟ್ಲೆಂಡ್ ಕರಾವಳಿಯಲ್ಲಿ ನಿರ್ಮಿಸಲಾಗುತ್ತಿದೆ. ಈ ಯೋಜನೆಯನ್ನು ‘ಹೈವಿಂಡ್’ ಎಂದು ಕರೆಯಲಾಗಿದೆ.

ನೀರಿನ ಆಳದಲ್ಲಿ ಪವನ ವಿದ್ಯುತ್ ಉತ್ಪಾದಿಸಲು ಈ ತಂತ್ರಜ್ಞಾನ ಅನುವು ಮಾಡಿಕೊಡುತ್ತದೆ. ಸದ್ಯ ಇರುವ ತಂತ್ರಜ್ಞಾನದಲ್ಲಿ ಸಿಗುವುದಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಇದಕ್ಕಿದೆ ಎಂದು ನಾರ್ವೆಯ ಸಂಸ್ಥೆಯೊಂದು ಹೇಳಿದೆ. ಇದು ಪ್ರಾಯೋಗಿಕ ಯೋಜನೆಯಾಗಿದ್ದು, 20,000 ಮನೆಗಳಿಗೆ ವಿದ್ಯುತ್ ಒದಗಿಸಬಲ್ಲದು.

‘ಸಮುದ್ರದ ವಾತಾವರಣದಲ್ಲೂ ಈ ತಂತ್ರಜ್ಞಾನ ಕಾರ್ಯ ನಿರ್ವಹಿಸಬಲ್ಲದು ಎಂದು ಖಚಿತಪಡಿಸಿಕೊಳ್ಳುವ ತಾಂತ್ರಿಕ ಅಭಿವೃದ್ಧಿ ಯೋಜನೆ ಇದು.

ADVERTISEMENT

ಇದೊಂದು ಕ್ರಾಂತಿಕಾರಕ ಬದಲಾವಣೆ ತರುವ ಯೋಜನೆ ಮತ್ತು ವೆಚ್ಚ ಕಡಿತಕ್ಕೆ ಖಂಡಿತ ಸಹಕಾರಿಯಾಗುತ್ತದೆ ಎಂಬುದು ನಮ್ಮ ಬಲವಾದ ನಂಬಿಕೆ’ ಎಂದು ಯೋಜನೆಯ ನಿರ್ದೇಶಕ ಲೆಯಿಪ್ ಡೆಲ್ಪ್ ಆಶಾವಾದ ವ್ಯಕ್ತಪಡಿಸಿದ್ದಾರೆ. ಈ ಟರ್ಬೈನ್‌ಗಳು ನೀರಿನಲ್ಲಿ ಒಂದು ಕಿಲೊ ಮೀಟರ್ ಆಳದಲ್ಲೂ ಕಾರ್ಯ ನಿರ್ವಹಿಸಬಲ್ಲವು.

***

* ದಪ್ಪವಾದ ಸರಪಳಿಗಳು ಈ ಗೋಪುರಗಳನ್ನು ನೀರಿನಲ್ಲಿ ಕೆಳಕ್ಕೆ ಎಳೆದು ಹಿಡಿದುಕೊಳ್ಳುತ್ತವೆ.
* ರೆಕ್ಕೆಗಳ ಹಿಂಭಾಗದಲ್ಲಿರುವ ಯಂತ್ರದ ಎಂಜಿಪೆಟ್ಟಿಗೆಯ ಮೇಲೆ ಎರಡು ಡಬಲ್ ಡೆಕ್ಕರ್ ಬಸ್‌ಗಳನ್ನು ನಿಲ್ಲಿಸಬಹುದು!
* ನಾರ್ವೆಯ ಸ್ಟ್ಯಾಟಾಯ್ಲ್ ಕಂಪೆನಿ ಯಂತ್ರಗಳನ್ನು ತಯಾರಿಸುತ್ತಿದೆ
* ಅಪಾರ ಸಂಖ್ಯೆಯಲ್ಲಿ ಪಕ್ಷಿಗಳು ಸಾಯುವ ಸಾಧ್ಯತೆ ಇರುವ ಕಾರಣಕ್ಕೆ ಯೋಜನೆಯನ್ನು ಆರ್‌ಎಸ್‌ಪಿವಿ ಸ್ಕಾಟ್ಲಂಡ್ ಸಂಸ್ಥೆವಿರೋಧಿಸಿದೆ

***

75 ಮೀಟರ್– ಪ್ರತೀ ರೆಕ್ಕೆಯ ಉದ್ದ– ಇದು ಏರ್‌ಬಸ್ ವಿಮಾನದ ರೆಕ್ಕೆಗೆ ಸಮ

175 ಮೀಟರ್– ರೆಕ್ಕೆಗಳನ್ನೂ ಒಳಗೊಂಡು ಗೋಪುರದ ಒಟ್ಟು ಎತ್ತರ

11,500 ಟನ್– ಪ್ರತೀ ಗೋಪುರದ ತೂಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.