ADVERTISEMENT

ಹೊಸ ಜೀವಿಗೆ ಕಲಾಂ ಹೆಸರಿಟ್ಟ ನಾಸಾ

ಪಿಟಿಐ
Published 21 ಮೇ 2017, 19:30 IST
Last Updated 21 ಮೇ 2017, 19:30 IST
ಹೊಸ ಜೀವಿಗೆ ಕಲಾಂ ಹೆಸರಿಟ್ಟ ನಾಸಾ
ಹೊಸ ಜೀವಿಗೆ ಕಲಾಂ ಹೆಸರಿಟ್ಟ ನಾಸಾ   
ಲಾಸ್ ಏಂಜಲೀಸ್:ಇತ್ತೀಚೆಗೆ ಪತ್ತೆಯಾದ ಹೊಸ ಏಕಾಣು ಜೀವಿಗೆ ಖ್ಯಾತ ವಿಜ್ಞಾನಿ ಭಾರತದ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಹೆಸರಿಡುವ ಮೂಲಕ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಗೌರವ ಸಲ್ಲಿಸಿದೆ. 
 
ವಿಶೇಷ ಅಂದರೆ ಈ ಜೀವಿ (ಒಂದು ರೀತಿಯ ಬ್ಯಾಕ್ಟೀರಿಯಾ) ಭೂಮಿ ಮೇಲೆ ಅಸ್ತಿತ್ವದಲ್ಲಿಲ್ಲ. ಇದು ಪತ್ತೆಯಾಗಿರುವುದು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್).
 
ಅಂತರ್‌ಗ್ರಹ ಪ್ರಯಾಣದ ಕುರಿತು ಸಂಶೋಧನೆ ನಡೆಸುವ ನಾಸಾದ ಅಗ್ರಗಣ್ಯ ಪ್ರಯೋಗಾಲಯ ‘ಜೆಟ್ ಪ್ರೊಪಲ್ಷನ್ ಪ್ರಯೋಗಾಲಯ’ದ  (ಜೆಪಿಎಲ್‌) ಸಂಶೋಧಕರು ಐಎಸ್‌ಎಸ್‌ನ ಫಿಲ್ಟರ್‌ಗಳ ಮೇಲೆ ಇದ್ದ ಹೊಸ ಜೀವಿಯನ್ನು ಪತ್ತೆಹಚ್ಚಿದ್ದು,  ಇದಕ್ಕೆ  ‘ಸೊಲಿಬಸಿಲ್ಲಸ್ ಕಲಾಮಿ’  ಎಂದು ಹೆಸರಿಟ್ಟಿದ್ದಾರೆ.
 
ಕಲಾಂ ಅವರು ಕೇರಳದ ತುಂಬಾದಲ್ಲಿ ಮೊದಲ ರಾಕೆಟ್ ಉಡಾವಣಾ ವ್ಯವಸ್ಥೆಯನ್ನು ರೂಪಿಸುವ ಮೊದಲು ಅಂದರೆ, 1963ರಲ್ಲಿ ನಾಸಾದಲ್ಲಿ ತರಬೇತಿ ಪಡೆದಿದ್ದರು.
 
ಸೊಲಿಬಸಿಲ್ಲಸ್ ಎಂಬುದು ಸಂತಾನೋತ್ಪತ್ತಿ ಸಾಮರ್ಥ್ಯದ ಘಟಕ ಹೊಂದಿರುವ ಏಕಾಣು ಜೀವಿ ಎಂದು ಜೆಪಿಎಲ್‌ನ ಜೈವಿಕ ತಂತ್ರಜ್ಞಾನ ಮತ್ತು ಗ್ರಹಗಳ ರಕ್ಷಣಾ ತಂಡದ ಹಿರಿಯ ವಿಜ್ಞಾನಿ ಡಾ. ಕಸ್ತೂರಿ ವೆಂಕಟೇಶ್ವರನ್ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.