ADVERTISEMENT

‘ಬ್ರೆಕ್ಸಿಟ್‌’ ಪರ ಮತ ಹಾಕಿದ್ದಕ್ಕೆ ಪಶ್ಚಾತ್ತಾಪ

​ಪ್ರಜಾವಾಣಿ ವಾರ್ತೆ
Published 1 ಜುಲೈ 2016, 19:30 IST
Last Updated 1 ಜುಲೈ 2016, 19:30 IST
‘ಬ್ರೆಕ್ಸಿಟ್‌’ ಪರ ಮತ ಹಾಕಿದ್ದಕ್ಕೆ ಪಶ್ಚಾತ್ತಾಪ
‘ಬ್ರೆಕ್ಸಿಟ್‌’ ಪರ ಮತ ಹಾಕಿದ್ದಕ್ಕೆ ಪಶ್ಚಾತ್ತಾಪ   

ಲಂಡನ್ (ಪಿಟಿಐ): ಐರೋಪ್ಯ ಒಕ್ಕೂಟದಿಂದ ಹೊರಹೋಗುವ ‘ಬ್ರೆಕ್ಸಿಟ್‌’ ಪರ ಐತಿಹಾಸಿಕ ಮತ ಚಲಾವಣೆ ಮಾಡಿದ ಬ್ರಿಟನ್‌ ಜನರಲ್ಲಿ ಸುಮಾರು 20.3 ಲಕ್ಷ ಮಂದಿ ಈಗ ಪಶ್ಚಾತ್ತಾಪಪಡುತ್ತಿದ್ದು, ‘ಬ್ರಿಗ್ರೆಟ್‌’ ಎಂಬ ಹೊಸ ಟ್ರೆಂಡ್‌ ಪ್ರಾರಂಭವಾಗಿದೆ.

‘ಬ್ರೆಕ್ಸಿಟ್‌’ ಪರ ಮತಚಲಾಯಿಸಿದವರಲ್ಲಿ  ಶೇ 7ರಷ್ಟು  ಮಂದಿ ತಮ್ಮ ಆಯ್ಕೆಯ ಕುರಿತು ವಿಷಾದ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದು ಮತದಾನದ ಅವಕಾಶ ದೊರೆತರೆ ಬ್ರಿಟನ್‌ನಲ್ಲಿಯೇ ಉಳಿದುಕೊಳ್ಳಲು ಬಯಸುತ್ತಿದ್ದಾರೆ ಎಂದು ‘ಒಪಿನಿಯಂ ರಿಸರ್ಚ್‌’ ಎಂಬ ಸಂಸ್ಥೆ ನಡೆಸಿರುವ ಸಮೀಕ್ಷೆಯಿಂದ ತಿಳಿದುಬಂದಿದೆ.

ಬ್ರೆಕ್ಸಿಟ್‌ ಪರ ಒಲವು ತೋರಿದ್ದಕ್ಕೆ ಪರಿತಪಿಸುತ್ತಿರುವ 20.3 ಲಕ್ಷ ಮಂದಿ, ಅದರ ವಿರುದ್ಧ ಮತ ಚಲಾಯಿಸಿದ್ದರೆ, ಈ ಆಘಾತಕಾರಿ ಫಲಿತಾಂಶಕ್ಕೆ ವಿರುದ್ಧವಾದ ಚಿತ್ರಣ ದೊರಕುತ್ತಿತ್ತು ಎಂದು ಸಮೀಕ್ಷೆ ಹೇಳಿದೆ. ಬ್ರೆಕ್ಸಿಟ್‌ ಪರ ಮತದಾರರು ಬ್ರಿಟನ್‌ ಮತ್ತು ಐರೋಪ್ಯ ಒಕ್ಕೂಟದ ನಡುವಣ ಮುಕ್ತ ಮಾರುಕಟ್ಟೆ ಸಂಚಾರ ವ್ಯವಸ್ಥೆಯನ್ನು ಅಂತ್ಯಗೊಳಿಸಲು ಬಯಸಿದ್ದರೆ, ವಿರುದ್ಧ ಮತಚಲಾಯಿಸಿರುವವರು ಒಕ್ಕೂಟದ ಏಕೀಕೃತ ಮಾರುಕಟ್ಟೆಯ ಭಾಗವಾಗಿಯೇ ಉಳಿಯಲು ಆದ್ಯತೆ ನೀಡಬೇಕು ಎಂಬುದಾಗಿ ಬಯಸಿದ್ದಾರೆ.

ಬ್ರಿಟನ್‌, ಒಕ್ಕೂಟದ ಭಾಗವಾಗಿಯೇ ಉಳಿದುಕೊಳ್ಳಬೇಕು ಎಂದು ಮತ ಚಲಾಯಿಸಿದ್ದವರಲ್ಲಿ ಶೇ 3ರಷ್ಟು ಮಂದಿ ಸಹ ತಮ್ಮ ಆಯ್ಕೆಗಾಗಿ ವಿಷಾದ ವ್ಯಕ್ತಪಡಿಸಿದ್ದಾರೆ ಎಂದೂ ಸಮೀಕ್ಷೆ ತಿಳಿಸಿದೆ.

ಜನಮತಾಭಿಪ್ರಾಯ ಸಂಗ್ರಹಣೆ ಬಳಿಕ ಬ್ರಿಟನ್‌ನ ಆರ್ಥಿಕತೆ,  ಜಗತ್ತಿನಲ್ಲಿನ ಸ್ಥಾನಮಾನಕ್ಕೆ ಧಕ್ಕೆ ಉಂಟಾಗಿದೆ ಎಂದು ಸಮೀಕ್ಷೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ 10ರಲ್ಲಿ ಒಬ್ಬರು ಬ್ರೆಕ್ಸಿಟ್‌ ಜಾರಿಗೆ ಬರುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬ್ರೆಕ್ಸಿಟ್‌ ಪ್ರಕ್ರಿಯೆ ಪ್ರಾರಂಭವಾಗುವ ಮುನ್ನವೇ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.