ADVERTISEMENT

‘ಹ್ಯಾಪಿ ಬರ್ತ್‌ಡೇ ಟು ಯು’ ಹಕ್ಕುಸ್ವಾಮ್ಯ ವಿವಾದ ಅಂತ್ಯ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2016, 19:48 IST
Last Updated 10 ಫೆಬ್ರುವರಿ 2016, 19:48 IST

ಲಾಸ್ ಏಂಜಲೀಸ್ (ಎಎಫ್‌ಪಿ): ಜಗತ್ತಿನ ಬಹು ಪ್ರಖ್ಯಾತ ಗೀತೆಗಳಲ್ಲೊಂದಾದ ‘ಹ್ಯಾಪಿ ಬರ್ತ್‌ಡೇ ಟು ಯು’ ಹಾಡನ್ನು ಕೊನೆಗೂ  ಜನರು ಮುಕ್ತವಾಗಿ  ಗುನುಗಲು  ಸಾಧ್ಯವಾಗಿದೆ.

ದೀರ್ಘಕಾಲದ ಕಾನೂನು ಸಮರದ ಬಳಿಕ ಗೀತೆ ಮೇಲಿದ್ದ ಹಕ್ಕುಸ್ವಾಮ್ಯದ ಹೋರಾಟ ಅಂತ್ಯವಾಗಿದೆ.  ಒಪ್ಪಂದದನ್ವಯ ₹95 ಕೋಟಿ ಪಾವತಿಸಲು ಅಮೆರಿಕಾದ ಪ್ರಕಾಶಕ ವಾರ್ನರ್/ಚಾಪೆಲ್ ಮ್ಯೂಸಿಕ್ ಒಪ್ಪಿಕೊಂಡಿದೆ.

ವಿವಾದ ಆರಂಭವಾಗಿದ್ದು 2013ರಲ್ಲಿ. ‘ಹ್ಯಾಪಿ ಬರ್ತ್‌ಡೇ ಟು ಯು’ ಹಾಡು ಬಳಸಿಕೊಂಡಿದ್ದಕ್ಕೆ  ಪ್ರಕಾಶಕರು ಸುಮಾರು ₹1 ಲಕ್ಷ ನೀಡುವಂತೆ ಚಿತ್ರನಿರ್ಮಾಪಕರಿಗೆ ಬೇಡಿಕೆ ಇಟ್ಟಿದ್ದರು.

ಶತಮಾನ  ಕಾಲ ಅಮೆರಿಕದಲ್ಲಿ ಪ್ರಸಿದ್ಧವಾಗಿದ್ದ ಹಾಗೂ ಜಾಗತಿಕವಾಗಿ ಹೆಸರು ಮಾಡಿದ್ದ  ಹಾಡನ್ನು ಹಣ ಕೊಟ್ಟು ಹಾಡಬೇಕಾದ ಸ್ಥಿತಿ ಇತ್ತು. ಹೀಗಾಗಿ ಅಮೆರಿಕಾದ ಎಲ್ಲ ಜನರ ಪರವಾಗಿ ಚಿತ್ರನಿರ್ಮಾಪಕರು ದಾವೆ ಹೂಡಿದ್ದರು.

ಗೀತೆಯ ಗೌರವಧನ ಪಡೆಯುವ ಹೋರಾಟವನ್ನು ಕೈಬಿಟ್ಟ ಪ್ರಕಾಶಕರು   ₹95 ಕೋಟಿ ಪಾವತಿಸುವ ಮೂಲಕ ವಿವಾದಕ್ಕೆ ಅಂತ್ಯ ಹಾಡಲು ನಿರ್ಧರಿಸಿದರು. ಈ ಸಂಬಂಧ ಮಂಗಳವಾರ ಇಲ್ಲಿನ ಫೆಡರಲ್‌ ಕೋರ್ಟ್‌ಗೆ ಒಪ್ಪಂದದ ವರದಿ ಸಲ್ಲಿಕೆಯಾಗಿತ್ತು. ಈವರೆಗೆ ಹಾಡನ್ನು ಖರೀದಿಸಿ ಬಳಸಿದವರಿಗೆ ಪರಿಹಾರ ಹಣವು ಹಂಚಿಕೆಯಾಗಲಿದೆ.

ಗೀತೆಯು ಸಾರ್ವಜನಿಕರ ಬಳಕೆಗೆ ಮುಕ್ತವಾಗಿದೆ ಎಂದು ಘೋಷಿಸುವ ಮೂಲಕ  80 ವರ್ಷಗಳ ಹಕ್ಕುಸ್ವಾಮ್ಯ ವಿವಾದ ಕೊನೆಗೊಂಡಿದೆ. ಈ ಒಪ್ಪಂದಕ್ಕೆ ನ್ಯಾಯಾಧೀಶರ ಸಹಿ ಇನ್ನಷ್ಟೇ ಬೀಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.