ADVERTISEMENT

10 ಸಾವಿರಕ್ಕೂ ಹೆಚ್ಚು ಎಬೋಲಾ ಪೀಡಿತರು

2015ರಲ್ಲಿ ಲಕ್ಷಾಂತರ ಲಸಿಕೆ ಪೂರೈಕೆಗೆ ವಿಶ್ವ ಆರೋಗ್ಯ ಸಂಸ್ಥೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2014, 20:23 IST
Last Updated 25 ಅಕ್ಟೋಬರ್ 2014, 20:23 IST
ಎಬೋಲಾ ಸೋಂಕು ಪತ್ತೆಯಾದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ತಾಲೀಮಿನ ಅಂಗವಾಗಿ ಸ್ಲೊವಾಕಿಯಾದಲ್ಲಿ ಇತ್ತೀಚೆಗೆ ರಕ್ಷಣಾ ಸಿಬ್ಬಂದಿ ವಿಶೇಷ ಉಡುಪುಗಳನ್ನು ಧರಿಸಿ, ಪೆಟ್ಟಿಗೆಯಲ್ಲಿ ವ್ಯಕ್ತಿಯೊಬ್ಬನನ್ನು ತಪಾಸಣಾ ಶಿಬಿರಕ್ಕೆ ಕೊಂಡೊಯ್ದರು 	–ಎಎಫ್‌ಪಿ ಚಿತ್ರ
ಎಬೋಲಾ ಸೋಂಕು ಪತ್ತೆಯಾದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ತಾಲೀಮಿನ ಅಂಗವಾಗಿ ಸ್ಲೊವಾಕಿಯಾದಲ್ಲಿ ಇತ್ತೀಚೆಗೆ ರಕ್ಷಣಾ ಸಿಬ್ಬಂದಿ ವಿಶೇಷ ಉಡುಪುಗಳನ್ನು ಧರಿಸಿ, ಪೆಟ್ಟಿಗೆಯಲ್ಲಿ ವ್ಯಕ್ತಿಯೊಬ್ಬನನ್ನು ತಪಾಸಣಾ ಶಿಬಿರಕ್ಕೆ ಕೊಂಡೊಯ್ದರು –ಎಎಫ್‌ಪಿ ಚಿತ್ರ   

ಜಿನೀವಾ (ಎಎಫ್‌ಪಿ): ಎಬೋಲಾ ಸೋಂಕಿತರ ಸಂಖ್ಯೆ 10 ಸಾವಿರ ದಾಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶನಿವಾರ ಹೇಳಿದೆ. ಈ ಸೋಂಕಿನಿಂದ ಮೃತಪಟ್ಟ­ವರ ಸಂಖ್ಯೆ 4,922ಕ್ಕೆ ಏರಿದೆ. ಎಬೋಲಾ ಸೋಂಕಿನ ಭಾರಿ ಹೊಡೆತಕ್ಕೆ ತುತ್ತಾಗಿರುವ ಪಶ್ಚಿಮ ಆಫ್ರಿಕಾದ ದೇಶಗಳಾದ ಸಿಯರಾ ಲಿಯೋನ್‌, ಲೈಬೀರಿಯಾ ಮತ್ತು ಗಿನಿ ಹೊರತುಪಡಿಸಿ ಬೇರೆ ದೇಶಗಳಲ್ಲಿ  27 ಪ್ರಕರಣಗಳು ಮಾತ್ರ ವರದಿಯಾಗಿವೆ. ಸತ್ತವರಲ್ಲಿ 10 ಜನರು ಈ ದೇಶಗಳಿ­ಂದ ಹೊರಗಿನವರು.

2015ರ ಮಧ್ಯದಲ್ಲಿ ಲಸಿಕೆ ಪೂರೈಕೆ: ಲಕ್ಷಾಂತರ ಎಬೋಲಾ ಲಸಿಕೆಗಳನ್ನು 2015ರ ಮಧ್ಯದ ಹೊತ್ತಿಗೆ ಪಶ್ಚಿಮ ಆಫ್ರಿಕಾ ದೇಶಗಳಿಗೆ ಪೂರೈಸಲಾಗು­ವುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ. ನ್ಯೂಯಾರ್ಕ್‌ನಲ್ಲಿ ಹೊಸ ಎಬೋಲಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಎರಡು ವರ್ಷದ ಹೆಣ್ಣು ಮಗುವೊಂದು ಮಾಲಿಯಲ್ಲಿ ಸೋಂಕಿನಿಂದಾಗಿ ಮೃತಪಟ್ಟ ನಂತರ ಡಬ್ಲ್ಯುಎಚ್‌ಒ ಈ ಹೇಳಿಕೆ ನೀಡಿದೆ.

ಅಮೆರಿಕದ ಇಬ್ಬರು ದಾದಿಯರು ಎಬೋಲಾದಿಂದ ಗುಣಮುಖರಾಗಿ­ದ್ದಾರೆ ಎಂದು ಘೋಷಿಸಲಾಗಿದೆ. ಅವರಲ್ಲಿ ಡಲ್ಲಾಸ್‌ ಮೂಲದ ನೈನಾ ಫಾಮ್‌ ಸೋಂಕಿನಿಂದ ಮುಕ್ತವಾಗಿರು­ವು­ದನ್ನು ಸಾಬೀತುಪಡಿಸುವುದಕ್ಕಾಗಿ ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಅವರನ್ನು ಅಪ್ಪಿಕೊಂಡರು. ಆದರೆ ಪಶ್ಚಿಮ ಆಫ್ರಿಕಾ ದೇಶಗಳಲ್ಲಿ ಎಬೋಲಾ ಸೋಂಕಿತರಿಗೆ ಚಿಕಿತ್ಸೆ ಮತ್ತು ಆರೈಕೆ ಒದಗಿಸಿದ ವೈದ್ಯರು ಮತ್ತು ಇತರರನ್ನು ಕಡ್ಡಾಯವಾಗಿ ಪ್ರತ್ಯೇಕ­ವಾಗಿ ಇರಿಸಬೇಕು ಎಂದು ನ್ಯೂಯಾರ್ಕ್‌ ಮತ್ತು ನ್ಯೂ ಜೆರ್ಸಿ ರಾಜ್ಯಗಳಲ್ಲಿ ಆದೇಶ
ಹೊರಡಿಸ­ಲಾಗಿದೆ.

ಗಿನಿ, ಲೈಬೀರಿಯಾ, ಸಿಯರಾ ಲಿಯೋನ್‌ ಮುಂತಾದ ದೇಶಗಳಲ್ಲಿ ಎಬೋಲಾ ರೋಗಿಗಳಿಗೆ ಚಿಕಿತ್ಸೆ ನೀಡಿದ ವೈದ್ಯರು, ರೋಗಿಗಳ ಸಂಪರ್ಕಕ್ಕೆ ಬಂದ ಇತರರು 21 ದಿನಗಳ ಕಾಲ ಕಡ್ಡಾಯವಾಗಿ ಪ್ರತ್ಯೇಕವಾಗಿ ಇರಬೇಕು ಎಂದು ಹೇಳಲಾಗಿದೆ. 2015ರ ಹೊತ್ತಿಗೆ ಎಬೋಲಾ ಲಸಿಕೆಗಳನ್ನು ಲಕ್ಷಾಂತರ ಪ್ರಮಾಣದಲ್ಲಿ ಪಶ್ಚಿಮ ಆಫ್ರಿಕಾ ದೇಶಗಳಿಗೆ ಪೂರೈಸಲಾ­ಗುವುದು ಎಂದು ಡಬ್ಲ್ಯುಎಚ್‌ಒ ಹೇಳಿದ್ದರಿಂದಾಗಿ ಪರಿಣಾಮಕಾರಿ ಲಸಿಕೆ ಕಂಡು ಹಿಡಿಯುವ ಪ್ರಯತ್ನ ಇನ್ನಷ್ಟು ವೇಗ ಪಡೆದುಕೊಂಡಿದೆ.

‘ಡಿಸೆಂಬರ್‌ ಹೊತ್ತಿಗೆ ಸೋಂಕು ಪೀಡಿತ ದೇಶಗಳಲ್ಲಿ ಲಸಿಕೆಯ  ಪರಿಣಾ­ಮ­ಕಾರಿತ್ವದ ಪರೀಕ್ಷೆ ನಡೆಸಲಾಗು­ವುದು’ ಎಂದು ಡಬ್ಲ್ಯುಎಚ್‌ಒ ಸಹಾಯಕ ಮಹಾ ನಿರ್ದೇಶಕರಾದ ಮೇರಿ ಪಾಲ್‌ ಕೀನಿ ಹೇಳಿದ್ದಾರೆ. ಆರ್‌ವಿಎಸ್‌ವಿ ಮತ್ತು ಸಿಎಚ್‌ಎಡಿ3 ಎಂಬ ಎರಡು ಲಸಿಕೆಗಳನ್ನು ಸದ್ಯಕ್ಕೆ ಪ್ರಯೋಗಕ್ಕೆ ಒಳಪಡಿಸಲಾಗಿದೆ. ಇನ್ನೂ ಐದು ಲಸಿಕೆಗಳು ತಯಾರಿ ಹಂತದ­ಲ್ಲಿವೆ. ಯಾವುದು ಪರಿಣಾಮಕಾರಿ ಅನಿಸುವುದೋ ಆ ಲಸಿಕೆಯನ್ನು ಭಾರಿ ಪ್ರಮಾಣದಲ್ಲಿ ಪಶ್ಚಿಮ ಆಫ್ರಿಕಾ ದೇಶಗಳಿಗೆ ಕಳುಹಿಸಲು ಡಬ್ಲ್ಯುಎಚ್‌ಒ ನಿರ್ಧರಿಸಿದೆ.

ಎರಡು ವರ್ಷದ ಹೆಣ್ಣು ಮಗು ಸಾವು
ಲಂಡನ್‌ (ಐಎಎನ್‌ಎಸ್‌):
ಮಾಲಿಯಲ್ಲಿ ಎರಡು ವರ್ಷದ ಹೆಣ್ಣು ಮಗುವೊಂದು ಎಬೋಲಾ ಸೋಂಕಿಗೆ ಶನಿವಾರ ಬಲಿಯಾಗಿದೆ.
ಗಿನಿಯಿಂದ ಬಸ್‌ ಮೂಲಕ ಮಾಲಿಗೆ ಬಂದ ಮಗುವಿನಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದವು ಎಂದು ಬಿಬಿಸಿ ವಾರ್ತಾ ವಾಹಿನಿ ವರದಿ ಮಾಡಿದೆ. 40ಕ್ಕೂ ಹೆಚ್ಚು ಜನರು ಈ ಮಗುವಿನ ಸಂಪರ್ಕಕ್ಕೆ ಬಂದಿದ್ದು ಅವರೆಲ್ಲರನ್ನೂ ಪ್ರತ್ಯೇಕವಾಗಿ ಇರಿಸಲಾಗಿದೆ.
ಬುಧವಾರ ಕಯೆಸ್‌ ಪಟ್ಟಣಕ್ಕೆ ಬಂದ ಮಗುವಿಗೆ ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈಕೆ  ಒಂದು ಸಾವಿರ ಕಿಲೋಮೀಟರ್‌ ಪ್ರಯಾಣ ಮಾಡಿ ಅಲ್ಲಿಗೆ ತಲುಪಿದ್ದಳು. ಕೆಲವು ವಾರಗಳ ಹಿಂದೆ ಮಗುವಿನ ತಾಯಿ ಗಿನಿಯಲ್ಲಿ ಮೃತಪಟ್ಟಿದ್ದರು. ನಂತರ ಆಕೆಯ ಸಂಬಂಧಿಕರು ಮಗುವನ್ನು ಮಾಲಿಗೆ ಕರೆತಂದಿದ್ದರು. ಮಾಲಿ ಎಬೋಲಾ ಸೋಂಕು ಕಾಣಿಸಿಕೊಂಡ ದಕ್ಷಿಣ ಆಫ್ರಿಕಾದ ಆರನೇ ದೇಶವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.