ADVERTISEMENT

‘20 ಕೋಟಿ ಭಾರತೀಯರಿಗೆ ಅಧಿಕ ರಕ್ತದೊತ್ತಡ’

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2016, 19:30 IST
Last Updated 18 ನವೆಂಬರ್ 2016, 19:30 IST

ಲಂಡನ್‌ (ಪಿಟಿಐ): ಜಗತ್ತಿನಲ್ಲಿ 113 ಕೋಟಿ ಜನರು ಅಧಿಕ ರಕ್ತದೊತ್ತಡ ಹೊಂದಿದ್ದಾರೆ. ಅದರಲ್ಲಿ ಭಾರತದ 20 ಕೋಟಿ ವಯಸ್ಕರು ಸೇರಿದ್ದಾರೆ ಎಂದು ಲಂಡನ್‌ ಇಂಪೀರಿಯಲ್‌ ಕಾಲೇಜ್‌ನ ವಿಜ್ಞಾನಿಗಳು ನಡೆಸಿದ ಅಧ್ಯಯನದ ವರದಿ ಹೇಳಿದೆ.

ಲಂಡನ್‌ನ ‘ದಿ ಲ್ಯಾನ್ಸೆಟ್‌ ಜರ್ನಲ್‌’ನಲ್ಲಿ ಈ ವರದಿಯ ವಿವರಗಳು ಪ್ರಕಟವಾಗಿವೆ. ಅಧಿಕ ರಕ್ತದೊತ್ತಡ ಹೊಂದಿರುವವರ ಸಂಖ್ಯೆ ಕಳೆದ  40 ವರ್ಷಗಳಲ್ಲಿ ಎರಡು ಪಟ್ಟು ಹೆಚ್ಚಿದೆ. 2015ರಲ್ಲಿ ಅಧಿಕ ರಕ್ತದೊತ್ತಡ ಹೊಂದಿರುವ ಜಗತ್ತಿನ ಅರ್ಧಕ್ಕಿಂತಲೂ ಹೆಚ್ಚು ವಯಸ್ಕರು ಏಷ್ಯಾದಲ್ಲಿ ವಾಸಿಸಿದ್ದರು ಹಾಗೂ ಈ ಸಮಸ್ಯೆ ಹೊಂದಿರುವ 26 ಕೋಟಿಯಷ್ಟು  ಜನರು ಚೀನಾದಲ್ಲಿದ್ದಾರೆ ಎಂದು ಈ ಅಧ್ಯಯನ ತಿಳಿಸಿದೆ.

ರಕ್ತದೊತ್ತಡಕ್ಕೆ ಸಂಬಂಧಿಸಿದಂತೆ ಸಂಶೋಧಕರು 1975ರಿಂದ 2015ರವರೆಗೆ ಎಲ್ಲ ದೇಶಗಳಲ್ಲಾದ ಬದಲಾವಣೆಗಳನ್ನು ಅಭ್ಯಸಿಸಿದ್ದಾರೆ.
2015ರಲ್ಲಿ ಮಹಿಳೆಯರಿಗಿಂತ ಪುರುಷರು ಅಧಿಕ ಸಂಖ್ಯೆಯಲ್ಲಿ ಈ ಸಮಸ್ಯೆ ಹೊಂದಿದ್ದಾರೆ ಎಂದಿದೆ ಸಂಶೋಧನೆ. ಜಾಗತಿಕವಾಗಿ 59 ಕೋಟಿಗಿಂತಲೂ ಹೆಚ್ಚು  ಪುರುಷರು ಹಾಗೂ 52 ಕೋಟಿಗಿಂತಲೂ ಹೆಚ್ಚು ಮಹಿಳೆಯರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. 

ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಲ್ಲಿ  ರಕ್ತದೊತ್ತಡ ಸಮಸ್ಯೆ ಕಡಿಮೆಯಾಗಿದೆ. ಆದರೆ ಅಭಿವೃದ್ಧಿ ಹೊಂದುತ್ತಿರುವ ಅಥವಾ ಜನರ ಆದಾಯ ಕಡಿಮೆಯಿರುವ  ರಾಷ್ಟ್ರಗಳಲ್ಲಿ   ಈ ಸಮಸ್ಯೆ ಹೆಚ್ಚಾಗಿದ್ದು,  ಪ್ರಮುಖವಾಗಿ ದಕ್ಷಿಣ ಏಷ್ಯಾ ಮತ್ತು ಆಫ್ರಿಕಾದಲ್ಲಿರುವ ದೇಶಗಳು ಇದರಲ್ಲಿ ಸೇರಿವೆ ಎನ್ನುತ್ತದೆ ಅಧ್ಯಯನ.

‘1975ರಲ್ಲಿದ್ದ ನಂಬಿಕೆಯಂತೆ  ರಕ್ತದೊತ್ತಡ ಸಮಸ್ಯೆಯು ಶ್ರೀಮಂತಿಕೆಗೆ ಸಂಬಂಧಿಸಿಲ್ಲ, ಬದಲಿಗೆ ಬಡತನಕ್ಕೆ ಸಂಬಂಧಿಸಿದ ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ’ ಎಂದು ಇಂಪೀರಿಯಲ್‌ ಕಾಲೇಜಿನ ಅಧ್ಯಾಪಕ ಮಜಿದ್‌ ಎಜ್ಜತಿ ಹೇಳಿದ್ದಾರೆ. ಈ ಸಮಸ್ಯೆಗೆ ಸ್ಪಷ್ಟವಾದ ಕಾರಣಗಳು ಸಿಕ್ಕಿಲ್ಲ. ಆದರೆ ಇದು ಸಮಗ್ರವಾದ ಉತ್ತಮ ಆರೋಗ್ಯಕ್ಕೆ ತಳಕು ಹಾಕಿಕೊಂಡಿರಬಹುದು. ಜೊತೆಗೆ ಹಣ್ಣು ಮತ್ತು ತರಕಾರಿಗಳ ಸೇವನೆ ಹೆಚ್ಚಾಗಿರುವುದು ಇದಕ್ಕೆ ಕಾರಣವಿರಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.